ಪರೀಕ್ಷೆ ದಿನವೇ ತಂದೆ ಅಂತ್ಯಕ್ರಿಯೆ; ದುಃಖದ ನಡುವೆಯೂ 10 ನೇ ತರಗತಿ ಪರೀಕ್ಷೆ ಬರೆದ ಬಾಲಕಿ !

ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ಭಡಾ ಗ್ರಾಮದ 16 ವರ್ಷದ ದಿಶಾ ನಾಗನಾಥ್ ಉಬಾಳೆ ಎಂಬ ಬಾಲಕಿ ತನ್ನ ತಂದೆಯ ಅಂತ್ಯಕ್ರಿಯೆಯ ಚಿತೆ ಉರಿಯುತ್ತಿದ್ದರೂ, ದುಃಖವನ್ನು ಮೆಟ್ಟಿ ನಿಂತು ಎಸ್‌ಎಸ್‌ಸಿ (10ನೇ ತರಗತಿ) ಪರೀಕ್ಷೆಯ ಮರಾಠಿ ಪತ್ರಿಕೆಯನ್ನು ಬರೆದು ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ.

ದಿಶಾ ಅವರ ತಂದೆ ನಾಗನಾಥ್ ಉಬಾಳೆ ಅವರು ಅನಾರೋಗ್ಯದಿಂದ ಗುರುವಾರ ಸಂಜೆ ನಿಧನರಾದರು. ಶುಕ್ರವಾರ ಅವರ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಿತು. ಅದೇ ದಿನ ದಿಶಾ ಅವರ ಎಸ್‌ಎಸ್‌ಸಿ ಮರಾಠಿ ಪರೀಕ್ಷೆ ಇತ್ತು. ತಂದೆಯ ಅಗಲಿಕೆಯಿಂದ ದಿಗ್ಭ್ರಮೆಗೊಂಡಿದ್ದ ದಿಶಾ ಪರೀಕ್ಷೆ ಬರೆಯುವ ಸ್ಥಿತಿಯಲ್ಲಿರಲಿಲ್ಲ.

ಆದರೆ ದಿಶಾ ಅವರ ಶಾಲೆಯ ಶಿಕ್ಷಕರು ಆಕೆಗೆ ಧೈರ್ಯ ತುಂಬಿ ಲಾತೂರು ವಿಭಾಗೀಯ ಮಂಡಳಿಯ ಅಧ್ಯಕ್ಷರೊಂದಿಗೆ ಮಾತನಾಡಿದರು. ನಂತರ ದಿಶಾ ಅವರೊಂದಿಗೆ ಮಾತನಾಡಿದ ಮಂಡಳಿಯ ಅಧ್ಯಕ್ಷರು ಆಕೆಗೆ ಪರೀಕ್ಷೆ ಬರೆಯುವಂತೆ ಪ್ರೋತ್ಸಾಹಿಸಿದರು.

ತಂದೆಯ ಅಗಲಿಕೆಯ ದುಃಖದಲ್ಲಿದ್ದರೂ, ದಿಶಾ ತನ್ನ ಕಣ್ಣೀರನ್ನು ಒರೆಸಿಕೊಂಡು, ತಂದೆಗೆ ವಿದಾಯ ಹೇಳಿ ಔಸಾದ ಅಜಿಮ್ ಪ್ರೌಢಶಾಲೆಯ ಪರೀಕ್ಷಾ ಕೇಂದ್ರಕ್ಕೆ ತೆರಳಿ ಮರಾಠಿ ಪತ್ರಿಕೆಯನ್ನು ಬರೆದಳು. ದಿಶಾ ಪರೀಕ್ಷೆ ಬರೆಯುತ್ತಿದ್ದ ಸಂದರ್ಭದಲ್ಲಿಯೇ ಅವರ ತಂದೆಯ ಅಂತ್ಯಕ್ರಿಯೆ ನಡೆಯಿತು ಎಂದು ತಿಳಿದುಬಂದಿದೆ.

ದಿಶಾ ಅವರ ಈ ದಿಟ್ಟತನಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ. ಕಷ್ಟದ ಪರಿಸ್ಥಿತಿಯಲ್ಲೂ ತನ್ನ ಕರ್ತವ್ಯವನ್ನು ಮರೆಯದೆ ಪರೀಕ್ಷೆ ಬರೆದಿರುವುದು ನಿಜಕ್ಕೂ ಶ್ಲಾಘನೀಯ. ದಿಶಾ ಅವರ ಸಾಧನೆ ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read