ನ್ಯಾಯಾಲಯವು ನಕ್ಷೆ ಮಂಜೂರಾತಿ, ಸ್ವಾಧಿನಾನುಭವ ಪ್ರಮಾಣ ಪತ್ರ(ಒಸಿ) ಕಡ್ಡಾಯ ಮಾಡಿರುವ ಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೊಸ ನಿವಾಸಕ್ಕೆ ವಿದ್ಯುತ್ ಸಂಪರ್ಕ ನೀಡಲು ಸಾಧ್ಯವಾಗಿಲ್ಲ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನ ಕುವೆಂಪು ನಗರದಲ್ಲಿ 80*120 ಅಡಿ ಅಳತೆ ನಿವೇಶನದಲ್ಲಿ ಮೂರು ಅಂತಸ್ತಿನ ಮನೆ ನಿರ್ಮಾಣ ಮಾಡಿದ್ದಾರೆ. ಆರು ತಿಂಗಳ ಹಿಂದೆಯೇ 94 ಕಿಲೊವ್ಯಾಟ್ ವಿದ್ಯುತ್ ಮಂಜೂರಾಗಿದೆ. ಆದರೆ, ನಕ್ಷೆ ಮಂಜೂರಾತಿ, ಒಸಿ ಕಡ್ಡಾಯ ಕಾರಣ ಅವರ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ.
ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ, ಈ ವರ್ಷದ ಏಪ್ರಿಲ್ ನಿಂದಲೇ ರಾಜ್ಯದ ಮೆಸ್ಕಾಂ, ಚೆಸ್ಕಾಂ, ಹೆಸ್ಕಾಂ ಸೇರಿದಂತೆ ಎಲ್ಲ ವಿದ್ಯುತ್ ಸರಬರಾಜು ಕಂಪನಿಗಳ ವ್ಯಾಪ್ತಿಯಲ್ಲಿ ವಿದ್ಯುತ್ ಸಂಪರ್ಕ ನೀಡಲು ನಕ್ಷೆ ಮಂಜೂರಾತಿ, ಒಸಿ ಕಡ್ಡಾಯ ಮಾಡಲಾಗಿದೆ. ಒಸಿ ಇಲ್ಲದ ಕಾರಣ ಸಿಎಂ ಸಿದ್ದರಾಮಯ್ಯ ಅವರ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಸಾಧ್ಯವಾಗಿಲ್ಲ.
ನಿವೇಶನ ಅಥವಾ ಕಟ್ಟಡ ವಿಸ್ತೀರ್ಣ ಪರಿಗಣಿಸದೆ ಈಗಾಗಲೇ ನಿರ್ಮಾಣ ಮಾಡಿದ ಎಲ್ಲಾ ಕಟ್ಟಡಗಳಿಗೆ ಒಂದು ಬಾರಿಗೆ ಮಾತ್ರ ಅನ್ವಯವಾಗುವಂತೆ ಷರತ್ತು ವಿಧಿಸಿ ವಿದ್ಯುತ್ ಸಂಪರ್ಕ ಕಲ್ಪಿಸುವ ಬಗ್ಗೆ ಇಂಧನ ಇಲಾಖೆ ಆಸಕ್ತಿ ತೋರಿಸಿದೆ. ನಗರ ಮತ್ತು ಗ್ರಾಮೀಣ ಭಾಗದಲ್ಲಿ ಸಂಬಂಧಿಸಿದ ಇಲಾಖೆಗಳಿಂದ ನಕ್ಷೆಗೆ ಅನುಮೋದನೆ ಪಡೆಯದೆ ನಿರ್ಮಾಣ, ಮಾಡಿದ ಕಟ್ಟಡಗಳಿಗೆ ಒಸಿ ಇಲ್ಲದೆ ಇದ್ದರೂ ವಿದ್ಯುತ್ ಸಂಪರ್ಕ ನೀಡುವ ಬಗ್ಗೆ, ಅರ್ಜಿ ಸಲ್ಲಿಸಿದ ಎಲ್ಲರಿಗೂ ವಿದ್ಯುತ್ ಸಂಪರ್ಕ ನೀಡಬೇಕೆಂದು ಇಂಧನ ಇಲಾಖೆ ಅಧಿಕಾರಿಗಳು ಸಲಹೆ ನೀಡಿದ್ದರೂ ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಇಲಾಖೆ ಅಧಿಕಾರಿಗಳು ಇದಕ್ಕೆ ಒಪ್ಪಿಗೆ ನೀಡಿಲ್ಲ.
ಕಾಯಂ ಸಂಪರ್ಕ ನೀಡದ ಕಾರಣ ಬಹುತೇಕ ಗ್ರಾಹಕರು ತಾತ್ಕಾಲಿಕ ಸಂಪರ್ಕವನ್ನೇ ಅವಲಂಬಿಸಿದ್ದಾರೆ. ಹೊಸದಾಗಿ ನಿರ್ಮಾಣ ಮನೆ ನಿರ್ಮಿಸುತ್ತಿರುವವರಿಗೆ ನೆಲ ಪ್ಲಸ್ ಎರಡು ಅಂತಸ್ತು ಅಥವಾ ಸ್ಟೀಲ್ಟ್ ಪ್ಲಸ್ ಮೂರು ಅಂತಸ್ತುವರೆಗೆ ಮಾತ್ರ ಕಟ್ಟಡ ನಿರ್ಮಿಸಬೇಕೆಂಬ ಷರತ್ತಿನ ಮೇಲೆ ತಾತ್ಕಾಲಿಕ ವಿದ್ಯುತ್ ಸಂಪರ್ಕ ನೀಡಲಾಗುತ್ತಿದೆ.
1,200 ಚದರಡಿ ಅಥವಾ ಅದಕ್ಕಿಂತ ಕಡಿಮೆ ನಿವೇಶನದ ವಸತಿ ಕಟ್ಟಡಗಳಿಗೆ ನಕ್ಷೆ ಮಂಜೂರಾತಿ ಒಸಿ ಅಗತ್ಯವಿಲ್ಲವೆಂದು ನಗರಾಭಿವೃದ್ಧಿ ಇಲಾಖೆ ಆದೇಶದಲ್ಲಿ ತಿಳಿಸಲಾಗಿದೆ. ಸುಮಾರು ಒಂದು ಲಕ್ಷ ಗ್ರಾಹಕರು ವಿದ್ಯುತ್ ಸಂಪರ್ಕಕ್ಕಾಗಿ ಕಾಯುತ್ತಿದ್ದು, ದಂಡ ಹಾಕಿ ವಿದ್ಯುತ್ ಸಂಪರ್ಕ ನೀಡಬಹುದೆಂದು ಸಲಹೆ ನೀಡಲಾಗಿದ್ದರೂ ಸಂಪುಟ ಸಭೆಯಲ್ಲಿ ಭಿನ್ನಾಭಿಪ್ರಾಯ ವ್ಯಕ್ತವಾದ ಕಾರಣ ಎಂಟು ತಿಂಗಳಾದರೂ ಸಮಸ್ಯೆ ಬಗೆಹರಿಯದಂತಾಗಿದೆ. ಇವೆಲ್ಲ ಕಾರಣಗಳಿಂದ ಮನೆ, ಕಟ್ಟಡ ನಿರ್ಮಿಸಿದವರಿಗೆ ವಿದ್ಯುತ್ ಸಂಪರ್ಕ ಸಿಗದಂತಾಗಿದೆ. ಜನಸಾಮಾನ್ಯರ ರೀತಿ ಮುಖ್ಯಮಂತ್ರಿ ಮನೆಗೂ ವಿದ್ಯುತ್ ಸಂಪರ್ಕ ಸಿಗದಂತಾಗಿದೆ.

