ಬೆಂಗಳೂರು: ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿದ ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತೆ ತರಕಾರಿ ದರ ಕೂಡ ಏರಿಕೆಯಾಗಿದೆ. ಹೌದು, ದಿನದಿಂದ ದಿನಕ್ಕೆ ತರಕಾರಿ ಬೆಲೆ ಗಗನಕ್ಕೇರುತ್ತಿದೆ. ಅದರಲ್ಲೂ ನುಗ್ಗೇಕಾಯಿಗೆ ಮಟನ್ ದರದಷ್ಟೇ ಇದೆ.
ಹೌದು, ನುಗ್ಗೇಕಾಯಿ ಕೆಜಿಗೆ 600 ರಿಂದ 700 ರೂ ಗೆ ಮಾರಾಟವಾಗುತ್ತಿದ್ದು, ನುಗ್ಗೇಕಾಯಿ ಖರೀದಿ ಅಸಾಧ್ಯ ಎಂದು ಜನಸಾಮಾನ್ಯರು ಬೇಸರ ಹೊರ ಹಾಕಿದ್ದಾರೆ. ಹವಾಮಾನ ವೈಪರೀತ್ಯದಿಂದ ಈ ಬಾರಿ ನುಗ್ಗೇಕಾಯಿ ಬೆಳೆ ಬಂದಿಲ್ಲ. ಆದ್ದರಿಂದ ನುಗ್ಗೇಕಾಯಿ ಹೆಚ್ಚು ಸರಬರಾಜಾಗುತ್ತಿಲ್ಲ. ಬೆಲೆ ಕೂಡ ಗಗನಕ್ಕೇರಿದೆ.
ಮಾರುಕಟ್ಟೆಯಲ್ಲಿ ಸೊಪ್ಪು, ತರಕಾರಿಗಳ ಬೆಲೆ ತೀವ್ರ ಏರಿಕೆ ಆಗುತ್ತಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ. ಮುಂಗಾರಿನಲ್ಲಿ ತರಕಾರಿ ಬೆಳೆ ಹೆಚ್ಚಾಗಿದ್ದು, ದರ ಸಾಮಾನ್ಯವಾಗಿತ್ತು. ಈಗ ಮುಂಗಾರು ಮುಕ್ತಾಯವಾಗಿದ್ದು, ಹಿಂಗಾರು ಮಳೆಯ ವಿಳಂಬದಿಂದಾಗಿ ಕಡಿಮೆ ಇಳುವರಿ ಹಾಗೂ ಬೆಳೆಗಳಿಗೆ ರೋಗ ಕಾರಣ ಬೇಡಿಕೆಗೆ ತಕ್ಕಂತೆ ಮಾರುಕಟ್ಟೆಗಳಿಗೆ ತರಕಾರಿ ಪೂರೈಕೆಯಾಗದ ಕಾರಣ ಬೆಲೆ ಗಗನಕ್ಕೇರಿದೆ.
ಒಂದು ಕೆಜಿ ನುಗ್ಗೆಕಾಯಿಗೆ 600-700 ರೂ ಆಗಿದೆ. ಅವರೆಕಾಯಿ 80 ರಿಂದ 100. ಬೀನ್ಸ್ ಕೆಜಿಗೆ 60 ರಿಂದ 80 ರೂ. ತೊಂಡೆಕಾಯಿ 80 ರಿಂದ 100. ಕ್ಯಾರೆಟ್ ಕೆಜಿಗೆ 60 ರಿಂದ 80. ಬೆಂಡೇಕಾಯಿ ಕೆಜಿಗೆ 60 ರಿಂದ 80. ಟೊಮೆಟೋ ಕೆಜಿಗೆ 60 ರಿಂದ 80 ರೂಗೆ ಮಾರಾಟವಾಗುತ್ತಿದೆ.ಪಾಲಕ್, ಮೆಂತೆ ಸೊಪ್ಪು 30 ರಿಂದ 40 ರೂ.ಗೆ ಏರಿಕೆಯಾಗಿದೆ. ಹಸಿ ಬಟಾಣಿ ದರ ಕೂಡ ಭಾರೀ ಏರಿಕೆಯಾಗಿದ್ದು, ಜನಸಾಮಾನ್ಯರು ಬೆಲೆ ಏರಿಕೆಯಿಂದ ಕಂಗಾಲಾಗಿದ್ದಾರೆ.
