ಮಂಗಳೂರು: ಮಂಗಳೂರು ಪೊಲೀಸರು ಮಾದಕ ವಸ್ತುಗಳ ವಿರುದ್ಧ ಸಮರ ಮುಂದುವರೆಸಿದ್ದು, ಡ್ರಗ್ ಪೆಡ್ಲರ್ ಆಘಿದ್ದ ವೈದ್ಯನನ್ನು ಬಂಧಿಸಿದ್ದಾರೆ.
ಬೀದರ್ ಮೂಲದ ವೈದ್ಯ ಪ್ರಜ್ವಲ್ ಪಿಣ್ಯಾಸ್ ಬಂಧಿತ ಆರೋಪಿ. ಡ್ರಗ್ ಜಾಲವೊಂದು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರದಿಂದ ಡ್ರಗ್ಸ್ ಪೂರೈಸುತ್ತಿತ್ತು. ವೈದ್ಯನ ಬಂಧನದ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯ ಡ್ರಗ್ಸ್ ಜಾಲದ ಬಗ್ಗೆ ಹಲವು ಸ್ಫೋಟಕ ಮಾಹಿತಿ ಲಭ್ಯವಾಗಿದೆ.
ಬೀದರ್ ಮೂಲದ ವೈದ್ಯ ಪ್ರಜ್ವಲ್, ಪ್ರಸ್ತುತ ಬೆಂಗಳೂರಿನ ಕೋಡಿಪಾಳ್ಯ ನಿವಾಸಿಯಾಗಿದ್ದು, ಪ್ರಜ್ವಲ್ ಹಾಗೂ ಇತರ ಪೆಡ್ಲರ್ ಗಳು ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡಿ ಡ್ರಗ್ಸ್ ಮಾರಾಟ ಮಾಡುತ್ತಿದ್ದರು. ಮಧ್ಯಪ್ರದೇಶ, ಮಹಾರಾಷ್ಟ್ರದಿಂದ ಮಂಗಳೂರಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದರು.
ಕೆಲ ದಿನಗಳ ಹಿಂದೆ ಡ್ರಗ್ಸ್ ಪ್ರಕರಣ ಸಂಬಂಧ ಮಂಗಳೂರು ಪೊಲೀಸರು ಆರು ಆರೋಪಿಗಳನ್ನು ಬಂಧಿಸಿದ್ದರು. ಬಂಧಿತರನ್ನು ತೀವ್ರ ವಿಚಾರಣೆ ನಡೆಸಿದಾಗ ವೈದ್ಯ ಪ್ರಜ್ವಲ್ ಪಿಣ್ಯಾಸ್ ಹೆಸರು ಬಾಯ್ಬಿಟ್ಟಿದ್ದಾರೆ. ಆತನೇ ಕಿಂಗ್ ಪಿನ್ ಎಂಬುದು ತನಿಖೆಯಲ್ಲಿ ಬಯಲಾಗಿದೆ.
ವೈದ್ಯ ಪ್ರಜ್ವಲ್ ಪಿಣ್ಯಾಸ್ ಈ ಹಿಂದೆ ಮಂಗಳೂರಿನ ಫಾದರ್ ಮುಲ್ಲರ್ಸ್ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿಯಾಗಿದ್ದ. ಮಂಗಳೂರಿನ ಮೂರು ಠಾಣೆಗಳಲ್ಲಿ ದಾಖಲಾಗಿದ್ದ ಪ್ರಕರಣಗಳ ಜಾಡು ಹಿಡಿದಾಗ ವೈದ್ಯ ಪ್ರಜ್ವಲ್ ಕರ್ಮಕಾಂಡ ಬಯಲಾಗಿದೆ. ಒಟ್ಟು 9 ಆರೋಪಿಗಳನ್ನು ಬಂಧಿಸಲಾಗಿದೆ.