ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಡ್ರಗ್ಸ್ ಪ್ರಕರಣಗಳು ಹೆಚ್ಚುತ್ತಿವೆ. ಬೆಂಗಳೂರಿನಲ್ಲಿ ಶಾಲಾ-ಕಾಲೇಜುವರೆಗೂ ಡ್ರಗ್ಸ್ ಗಳು ಬಂದು ನಿಂತಿವೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕಿಡಿ ಕಾರಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಅಶೋಕ್, ಡ್ರಗ್ಸ್ ಕೇಸ್ ನಲ್ಲಿ ಮೆಕ್ಸಿಕೊ ಸಿಟಿಯನ್ನು ಬೆಂಗಳೂರು ಮೀರಿಸಿದೆ. ಅಷ್ಟೊಂದು ಪ್ರಮಾಣದಲ್ಲಿ ಡ್ರಗ್ಸ್ ಬೆಂಗಳೂರಿಗೆ ಬರುತ್ತಿರುವುದಾದರೂ ಹೇಗೆ? ಸರ್ಕಾರ ಹಾಗೂ ಪೊಲೀಸ್ ಇಲಾಖೆ ಈ ನಿಟ್ಟಿನಲ್ಲಿ ಎಚ್ಚೆತ್ತುಕೊಳ್ಳಬೇಕು ಎಂದರು.
ಹೊಸ ವರ್ಷಾಚರಣೆ ಸಮೀಪಿಸುತ್ತಿದ್ದಂತೆಯೇ ಬೆಂಗಳೂರಿನಲ್ಲಿ ಕೋಟ್ಯಂತರ ರೂಪಾಯಿ ಮಾದಕ ವಸ್ತುಗಳ ಪೂರೈಕೆಯಾಗುತ್ತಿದೆ. ಪೊಲೀಸ್ ಇಲಾಖೆ ಏರ್ ಪೋರ್ಟ್, ರಾಜ್ಯದ ಗಡಿ ಭಾಗಗಳಲ್ಲಿ ಅಲರ್ಟ್ ಆಗಬೇಕು. ರಾಜ್ಯ ಸರ್ಕಾರ ಡ್ರಗ್ಸ್ ಪ್ರಕರಣಗಳ ಬಗ್ಗೆ ಮುಲಾಜಿಲ್ಲದೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
