ಬೆಂಗಳೂರು: ಬೆಂಗಳೂರಿನ ಜನನಿಬಿಡ ರಸ್ತೆಯಲ್ಲಿ ಚಹಾ ಕುಡಿಯುತ್ತಾ ರೀಲ್ಸ್ ಮಾಡಲು ಹೋದ ವ್ಯಕ್ತಿಯೊಬ್ಬರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರಸಿದ್ಧರಾಗುವ ಹುಚ್ಚಿನಲ್ಲಿ ಈತ ರಸ್ತೆ ಮಧ್ಯೆ ಕುರ್ಚಿಯಿಟ್ಟು ಕುಳಿತು ವಾಹನಗಳು ಹಾದುಹೋಗುತ್ತಿದ್ದಂತೆ ಚಹಾ ಕುಡಿಯುತ್ತಾ ರೀಲ್ಸ್ ಮಾಡಿದ್ದರು.
ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಬೆಂಗಳೂರು ಪೊಲೀಸರ ಗಮನಕ್ಕೆ ಬಂದಿದ್ದು, ಅವರು ಆ ವ್ಯಕ್ತಿಯನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. ಸಾರ್ವಜನಿಕ ಸುರಕ್ಷತೆಗೆ ಅಪಾಯ ಉಂಟುಮಾಡಿದ ಮತ್ತು ಇನ್‌ಸ್ಟಾಗ್ರಾಮ್ ರೀಲ್ಸ್‌ಗಾಗಿ ಸಾರ್ವಜನಿಕ ರಸ್ತೆಗಳಲ್ಲಿ ಸ್ಟಂಟ್ ಮಾಡಿದ ಆರೋಪದ ಮೇಲೆ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಆರೋಪಿಯು ಏಪ್ರಿಲ್ 12 ರಂದು ಮಾಗಡಿ ರಸ್ತೆಯಲ್ಲಿ ರಸ್ತೆಯ ಮೇಲೆ ಕುರ್ಚಿಯ ಮೇಲೆ ಕುಳಿತು ಚಹಾ ಕುಡಿಯುತ್ತಿರುವುದು ವಿಡಿಯೊದಲ್ಲಿ ಕಂಡುಬಂದಿದೆ.
ನಂತರ ಇನ್‌ಸ್ಟಾಗ್ರಾಮ್‌ಗೆ ಅಪ್‌ಲೋಡ್ ಮಾಡಿದ ಈ ವಿಡಿಯೊ ತ್ವರಿತವಾಗಿ ಸಾರ್ವಜನಿಕರ ಗಮನ ಸೆಳೆಯಿತು. ಇದರ ಬೆನ್ನಲ್ಲೇ ಪೊಲೀಸರು ಈ ವಿಚಿತ್ರ ಘಟನೆಯ ತನಿಖೆ ನಡೆಸಿ ಆತನನ್ನು ಪತ್ತೆಹಚ್ಚಿದ್ದಾರೆ.
“ಟ್ರಾಫಿಕ್ ಲೈನ್‌ನಲ್ಲಿ ಟೀ ಟೈಮ್ ಫೇಮ್ ತರುವುದಿಲ್ಲ, ದಂಡ ತರುತ್ತದೆ !!! ಬಿಬಿಎಂಪಿ ನಿಮ್ಮನ್ನು ನೋಡುತ್ತಿದೆ ಎಚ್ಚರ,” ಎಂದು ಪೊಲೀಸರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದರೊಂದಿಗೆ ವ್ಯಕ್ತಿ ಸ್ಟಂಟ್ ಮಾಡುತ್ತಿರುವ ವಿಡಿಯೊ ಮತ್ತು ಆತನನ್ನು ಬಂಧಿಸಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ನಿರ್ಲಕ್ಷ್ಯದ ವರ್ತನೆ ಶಿಕ್ಷಾರ್ಹ ಅಪರಾಧ ಮತ್ತು ಸಾರ್ವಜನಿಕ ಸುರಕ್ಷತೆಗೆ ಧಕ್ಕೆಯಾಗದಂತೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತೀಚಿನ ಘಟನೆಗಳಲ್ಲಿ, ಆಘಾತಕಾರಿ ಸಂದರ್ಭಗಳಲ್ಲಿ ರೀಲ್ಸ್ ಮಾಡಲು ಪ್ರಯತ್ನಿಸಿ ಜನರು ತಮ್ಮ ಜೀವವನ್ನೇ ಕಳೆದುಕೊಂಡಿದ್ದಾರೆ. ಮಹಿಳೆಯೊಬ್ಬರು ರೀಲ್ಸ್ ಮಾಡಲು ಪ್ರಯತ್ನಿಸುತ್ತಿದ್ದಾಗ ಗಂಗಾ ನದಿಯಲ್ಲಿ ಕೊಚ್ಚಿಹೋದರು. ಮತ್ತೊಂದು ಘಟನೆಯಲ್ಲಿ, ವ್ಯಕ್ತಿಯೊಬ್ಬರು ರೈಲು ತಮ್ಮ ಮೇಲೆ ಹಾದುಹೋಗುವಾಗ ರೀಲ್ಸ್ ರೆಕಾರ್ಡ್ ಮಾಡಿದ್ದು, ಅವರನ್ನು ಬಂಧಿಸಲಾಯಿತು.
Taking tea time to the traffic line will brew you a hefty fine, not fame !!! BEWARE BCP is watching you#police #awareness #weserveandprotect #stayvigilant pic.twitter.com/5A8aCJuuNc
— ಬೆಂಗಳೂರು ನಗರ ಪೊಲೀಸ್ BengaluruCityPolice (@BlrCityPolice) April 17, 2025