ಬೆಂಗಳೂರು : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ (Minister Dinesh Gundu Rao) ಅವರು ಇದೀಗ ಸಿಎಂ ಸಿದ್ದರಾಮಯ್ಯನವರ (CM Siddaramaiah) ಹಾದಿಯನ್ನೇ ತುಳಿದಿದ್ದು, ತಮಗೆ ಇನ್ಮುಂದೆ ಹಾರ, ತುರಾಯಿ, ಶಾಲುಗಳನ್ನು ಹಾಕದಂತೆ ಮನವಿ ಮಾಡಿದ್ದು, ಬದಲಾಗಿ ಪುಸ್ತಕಗಳನ್ನು ಉಡುಗೊರೆಯಾಗಿ(Books Gift) ಕೊಡಬಹುದು ಎಂದು ಹೇಳಿದ್ದಾರೆ.
ಸಚಿವ ದಿನೇಶ್ ಗುಂಡೂರಾವ್ ಅವರ ಸೂಚನೆಯ ಮೇರೆಗೆ ಅವರ ಆಪ್ತ ಕಾರ್ಯದರ್ಶಿ ಕೆ.ಎ. ಹಿದಾಯತ್ತುಲ್ಲ ಅವರು ಈ ಕುರಿತು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದು, ಜಿಲ್ಲಾಧಿಕಾರಿಗಳು ಈ ಸಂಬಂಧ ಸುತ್ತೋಲೆ ಹೊರಡಿಸಿದ್ದಾರೆ. ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವ ದಿನೇಶ್ ಗುಂಡೂರಾವ್ ಅವರು ಸಮಾರಂಭಗಳಲ್ಲಿ ಭಾಗವಹಿಸಿದಾಗ ಹಾರ, ತುರಾಯಿ ಬದಲು ಪುಸ್ತಕಗಳನ್ನು ನೀಡುವಂತೆ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ಬೆನ್ನಲ್ಲೇ ತಮಗೆ ಸನ್ಮಾನ ಮಾಡುವ ಸಂದರ್ಭದಲ್ಲಿ ಹಾರು, ಶಾಲು ನೀಡಬೇಡಿ. ಕೊಡುವುದಿದ್ದರೆ ಪುಸ್ತಕಗಳನ್ನು ಕೊಡುವಂತೆ ಮನವಿ ಮಾಡಿದ್ದರು. ಇದೀಗ ಸಚಿವ ದಿನೇಶ್ ಗುಂಡೂರಾವ್ ಕೂಡ ಇದೇ ದಾರಿಯಲ್ಲಿ ಸಾಗಲಿದ್ದು, ಮೆಚ್ಚುಗೆ ವ್ಯಕ್ತವಾಗಿದೆ.