ದೇವನಹಳ್ಳಿ: ಶಾಲಾ ಆವರಣದಲ್ಲಿ ತನ್ನ ಪಾಡಿಗೆ ತಾನು ಮಲಗಿದ್ದ ನಾಯಿ ಮೇಲೆ ಕಿಡಿಗೇಡಿಯೊಬ್ಬ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದು, ಜೀವ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮೂಕ ಪ್ರಾಣಿ ನರಳುತ್ತಾ ಇಡೀ ಊರಿನಲ್ಲಿ ಓಡಾಡಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯಲ್ಲಿ ನಡೆದಿದೆ.
ಮಹೇಶ್ ಎಂಬ ಪುಂಡನೊಬ್ಬ ನಾಯಿ ಮೇಲೆ ಎಳನೀರು ಕಡಿಯುವ ಮಚ್ಚಿನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ಗಂಭೀರವಾಗಿ ಹಲ್ಲೆಗೊಳಗಾಗಿರುವ ನಾಯಿ ರಕ್ತದ ಮಡುವಲ್ಲಿ ನರಳಾಡಿದೆ. ದೇವನಹಳ್ಳಿ ತಾಲೂಕಿನ ಚಿನ್ನ ಕೆಂಪನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇದನ್ನು ಕಂಡ ಸ್ಥಳೀಯರು ನಾಯಿ ಮಾಲೀಕನಿಗೆ ವಿಷಯ ತಿಳಿಸಿದ್ದಾರೆ.
ಸದ್ಯ ನಾಯಿಯನ್ನು ರಕ್ಷಿಸಿ ಚಿಕಿತ್ಸೆ ನೀಡಲಾಗಿದೆ. ಕುಡಿದ ಮತ್ತಿನಲ್ಲಿ ಯುವಕನೊಬ್ಬ ಮೂಕ ಪ್ರಾಣಿಯ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದು, ಇದು ಖಂಡನೀಯ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.