ಪತ್ನಿ ಚಾರಿತ್ರ್ಯ ಶಂಕೆ: ವೈದ್ಯ ಪತಿಯಿಂದ ಪತ್ನಿ ಕೊಲೆ, ಸಾಥ್‌ ನೀಡಿದ ಸಹೋದರ !

ನಾಗಪುರ: ಪತ್ನಿಯ ಚಾರಿತ್ರ್ಯದ ಬಗ್ಗೆ ಅನುಮಾನ ಹೊಂದಿದ್ದ ವೈದ್ಯನೊಬ್ಬ ತನ್ನ ಸಹೋದರನ ಸಹಾಯದಿಂದ ಆಕೆಯನ್ನೇ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ನಾಗಪುರದಲ್ಲಿ ಬೆಳಕಿಗೆ ಬಂದಿದೆ. ಈ ಕೃತ್ಯವನ್ನು ದರೋಡೆ ಎಂದು ಬಿಂಬಿಸಲು ಆರೋಪಿಗಳು ಯತ್ನಿಸಿದ್ದು, ಪೊಲೀಸರ ತನಿಖೆಯಿಂದ ಸತ್ಯಾಂಶ ಹೊರಬಿದ್ದಿದೆ.

ರಾಯ್‌ಪುರದ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಬೋಧಕರಾಗಿರುವ ಡಾ. ಅನಿಲ್ ರಾಹುಲೆ ಎಂಬಾತನೇ ತನ್ನ ಪತ್ನಿ ಡಾ. ಅರ್ಚನಾ ಅವರನ್ನು ಕೊಲೆಗೈದ ಆರೋಪಿ. ಮೃತ ಡಾ. ಅರ್ಚನಾ, ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಫಿಸಿಯೋಥೆರಪಿ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿದ್ದರು.

ಪೊಲೀಸರ ಪ್ರಕಾರ, ಡಾ. ಅನಿಲ್ ರಾಹುಲೆ, ಪತ್ನಿಯ ನಡತೆಯ ಬಗ್ಗೆ ಸಂಶಯ ಹೊಂದಿದ್ದರು. ಈ ಕಾರಣದಿಂದಾಗಿ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಮತ್ತು ಡಾ. ಅನಿಲ್ ಪತ್ನಿಯನ್ನು ದೈಹಿಕವಾಗಿಯೂ ಹಲ್ಲೆ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಏಪ್ರಿಲ್ 9 ರಂದು ಡಾ. ಅನಿಲ್ ರಾಹುಲೆ ತನ್ನ ಸಹೋದರ ರಾಜು ರಾಹುಲೆಯನ್ನು ನಾಗ್ಪುರದ ಲಾಡಿಕರ್ ಲೇಔಟ್‌ನಲ್ಲಿರುವ ತಮ್ಮ ಮನೆಗೆ ಕರೆಸಿಕೊಂಡಿದ್ದ. ಡಾ. ಅನಿಲ್ ತನ್ನ ಪತ್ನಿಯ ಕಾಲುಗಳನ್ನು ಹಿಡಿದುಕೊಂಡಿದ್ದಾಗ, ರಾಜು ಕಬ್ಬಿಣದ ರಾಡ್‌ನಿಂದ ಆಕೆಯ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಕೊಲೆ ನಡೆದ ಬಳಿಕ ಇಬ್ಬರೂ ಸಹೋದರರು ಮನೆಯ ಸೆಂಟ್ರಲ್ ಲಾಕಿಂಗ್ ಸಿಸ್ಟಮ್ ಬಳಸಿ ಬೀಗ ಹಾಕಿ ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಏಪ್ರಿಲ್ 12 ರಂದು ಡಾ. ರಾಹುಲೆ ವಾಪಸ್ ಬಂದು ಮನೆಯಲ್ಲಿ ದರೋಡೆ ನಡೆದಿದೆ ಎಂದು ನಾಟಕವಾಡಿದ್ದಾರೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ನಂತರ ತನಿಖೆ ಆರಂಭಿಸಲಾಯಿತು. ಮೇಲ್ನೋಟಕ್ಕೆ ಇದು ದರೋಡೆ ಪ್ರಕರಣವೆಂದು ಕಂಡರೂ, ಮೃತದೇಹ ಕೊಳೆತಿರುವುದು ಕೊಲೆ ಕೆಲವು ದಿನಗಳ ಹಿಂದೆಯೇ ನಡೆದಿದೆ ಎಂಬುದನ್ನು ಸೂಚಿಸಿತು.

ಪೊಲೀಸರು ಡಾ. ರಾಹುಲೆ ವಿಚಾರಣೆ ನಡೆಸಿದಾಗ ಅವರು ವಿಚಿತ್ರವಾಗಿ ವರ್ತಿಸಿ, ಮೂರ್ಛೆ ಹೋದಂತೆ ನಾಟಕವಾಡಿದ್ದು ಅನುಮಾನಕ್ಕೆ ಕಾರಣವಾಯಿತು. ತೀವ್ರ ವಿಚಾರಣೆಯ ನಂತರ ಡಾ. ರಾಹುಲೆ ತನ್ನ ಪತ್ನಿಯನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ನಂತರ ಆತ ಮತ್ತು ಆತನ ಸಹೋದರನನ್ನು ಬಂಧಿಸಲಾಗಿದೆ. ಈ ಕೊಲೆಗೆ ಬೇರೆ ಯಾವುದೇ ಕಾರಣಗಳಿವೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read