ತಿರುವನಂತಪುರಂನ ಎ.ಜೆ. ಆಸ್ಪತ್ರೆಯ ವೈದ್ಯಕೀಯ ಆಡಳಿತಾಧಿಕಾರಿ ಡಾ. ಪಿ. ಗೋಪಾಲಕೃಷ್ಣನ್, ಬುಧವಾರ (ಜುಲೈ 9, 2025) ಬೆಳಿಗ್ಗೆ ಆಸ್ಪತ್ರೆಯಲ್ಲಿ ಕರ್ತವ್ಯಕ್ಕೆ ಹಾಜರಾದ ಕೂಡಲೇ ಕುಸಿದು ಬಿದ್ದು, ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಪತ್ತನಂತಿಟ್ಟದ ಕೊನ್ನಿ ವೆನ್ಮೆಲಿ ಮೂಲದವರಾಗಿದ್ದರು.
ಡಾ. ಗೋಪಾಲಕೃಷ್ಣನ್ , ಬುಧವಾರ ತಮ್ಮ ಕಳಕುತ್ತಂನಲ್ಲಿರುವ ಮಗನ ಮನೆಯಿಂದ ಎ.ಜೆ. ಆಸ್ಪತ್ರೆಗೆ ಕರ್ತವ್ಯಕ್ಕೆ ಬಂದಿದ್ದರು. ಆದರೆ, ಕಾರಿನಿಂದ ಇಳಿಯುತ್ತಿದ್ದಂತೆಯೇ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಯಿತು ಮತ್ತು ನಂತರ ತಿರುವನಂತಪುರಂನ ಮತ್ತೊಂದು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅವರ ಜೀವವನ್ನು ಉಳಿಸಲು ಸಾಧ್ಯವಾಗಲಿಲ್ಲ.
ಡಾ. ಗೋಪಾಲಕೃಷ್ಣನ್ ಅವರು ಬಹಳ ಸಮಯದಿಂದ ಕಳಕುತ್ತಂನಲ್ಲಿರುವ ತಮ್ಮ ಮಗನ ಮನೆಯಲ್ಲಿ ವಾಸಿಸುತ್ತಿದ್ದರು. ಅವರು ಕೊಲ್ಲಂನ ಅಜಿಝಿಯಾ ವೈದ್ಯಕೀಯ ಕಾಲೇಜು, ನೆಯ್ಯತ್ತಿಂಕರಾದ ನಿಮ್ಸ್ ಆಸ್ಪತ್ರೆ, ತಿರುವನಂತಪುರಂನ ಜುಬಿಲಿ ಆಸ್ಪತ್ರೆ, ಪತ್ತನಂತಿಟ್ಟದ ಮುತ್ತೂಟ್ ಮೆಡಿಕಲ್ ಕೇರ್, ಮತ್ತು ಕೊನ್ನಿಯ ಬಿಲೀವರ್ಸ್ ಮೆಡಿಕಲ್ ಸೆಂಟರ್ ಸೇರಿದಂತೆ ಹಲವು ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಿದ್ದರು.