ನಾವೆಲ್ಲಾ ಸಹಜವಾಗಿ ಎರಡು/ಮೂರು ಮದುವೆಗಳನ್ನಾಗಿರುವ ಅನೇಕರನ್ನು ನೋಡಿ ಬೆಳೆದಿದ್ದೇವೆ. ಕೆಲವೊಂದು ಪ್ರದೇಶಗಳು ಹಾಗೂ ಸಮುದಾಯಗಳಲ್ಲಿ ಎಷ್ಟು ಮದುವೆ ಬೇಕಾದರೂ ಆಗಬಹುದು ಎಂಬುದನ್ನೂ ಕೇಳಿದ್ದೇವೆ.
ಆದರೆ ಇಲ್ಲೊಬ್ಬ ಮಹಾಶಯ ನೂರಕ್ಕೂ ಹೆಚ್ಚು ಬಾರಿ ಮದುವೆಯಾಗಿದ್ದಾನೆ! 1949 ರಿಂದ 1981ರ ನಡುವೆ ವಿಚ್ಛೇದನವನ್ನೇ ಪಡೆಯದೇ ನೂರಕ್ಕೂ ಹೆಚ್ಚು ಬಾರಿ ಮದುವೆಯಾಗಿದ್ದಾನೆ ಈ ಮಹಾಶೂರ.
ಗಿಯೋವಾನಿ ವಿಜಿಲಿಟ್ಟೋ ಎಂಬ ಹೆಸರಿನಲ್ಲಿ ಗುರುತಿಸಲಾಗಿರುವ ಈ ವ್ಯಕ್ತಿಯ ’ಸಾಧನೆ’ಯನ್ನು ಗಿನ್ನೆಸ್ ವಿಶ್ವ ದಾಖಲೆ ಟ್ವಿಟರ್‌ನಲ್ಲಿ ಶೇರ್ ಮಾಡಿದೆ. ತನ್ನ ಕೊನೆಯ ಪತ್ನಿಯನ್ನು ಮದುವೆಯಾದ ಸಂದರ್ಭದಲ್ಲಿ ಗಿಯೋವಾನಿ ಎಂಬ ಹೆಸರಿಟ್ಟುಕೊಂಡಿದ್ದಾನೆ ಈ ಭೂಪ.
ಇಟಲಿಯ ಸಿರಾಕ್ಯೂಸಾದಲ್ಲಿ ಏಪ್ರಿಲ್ 3, 1929ರಲ್ಲಿ ಜನಿಸಿರುವುದಾಗಿ ಹೇಳಿಕೊಂಡಿರುವ ಗಿಯೋವಾನಿ ತನ್ನ 53ನೇ ವರ್ಷದಲ್ಲಿ ಈ ರೀತಿ ಮಾಡುವಾಗ ಸಿಕ್ಕಿಹಾಕಿಕೊಂಡಿದ್ದಾನೆ. ತನ್ನ ನಿಜ ಹೆಸರು ನಿಕೋಲಾಯ್ ಪೆರುಸ್ಕೋವ್ ಎಂದು ಹೇಳಿಕೊಂಡಿದ್ದ ಈತನ ನಿಜನಾಮ ಫ್ರೆಡ್ ಜಿಪ್ಪ್ ಆಗಿದ್ದು, ಈತ ಏಪ್ರಿಲ್ 3, 1936ರಲ್ಲಿ ನ್ಯೂಯಾರ್ಕ್ ನಗರದಲ್ಲಿ ಜನಿಸಿದ್ದಾನೆ ಎಂದು ವಕೀಲರೊಬ್ಬರು ವಾದ ಮಾಡಿದ್ದರು.
32 ವರ್ಷಗಳ ಅವಧಿಯಲ್ಲಿ 104 ಅಥವಾ 105 ಮಹಿಳೆಯರನ್ನು ವಿಜಿಲಿಟೋ ಮದುವೆಯಾಗಿದ್ದಾನೆ. ಆದರೂ ಸಹ ಈತನ ಯಾವೊಬ್ಬ ಪತ್ನಿಗೂ ಈತನದೇ ಮತ್ಯಾವುದೇ ಪತ್ನಿಯ ಬಗ್ಗೆ ಪರಸ್ಪರ ಗೊತ್ತೇ ಇರಲಿಲ್ಲ! ಅಮೆರಿಕದ 27 ವಿವಿಧ ರಾಜ್ಯಗಳು ಹಾಗೂ 14 ದೇಶಗಳಲ್ಲಿ ವಿಜಿಲಿಟೋ ಇಷ್ಟೆಲ್ಲಾ ಮದುವೆಗಳನ್ನು ಆಗಿದ್ದಾನೆ.
ಬಳಸಿದ ವಸ್ತುಗಳ ಮಾರುಕಟ್ಟೆಗಳಲ್ಲಿ ಭೇಟಿಯಾದ ಮೊದಲ ಬಾರಿಗೇ ಲಲನೆಯರನ್ನು ತನ್ನ ಮಾತುಗಳಿಂದ ಮೋಡಿ ಮಾಡುತ್ತಿದ್ದ ಈತ, ಅವರನ್ನು ಬಹುಬೇಗ ಮದುವೆಯಾಗುವಂತೆ ಪ್ರೇರೇಪಿಸುತ್ತಿದ್ದ. ಮದುವೆಯಾದ ಕೂಡಲೇ ಮಹಿಳೆಯರ ಹಣ ಮತ್ತು ಚರಾಸ್ತಿಗಳೊಂದಿಗೆ ಪರಾರಿಯಾಗುತ್ತಿದ್ದ.
ತಾನು ಬಹು ದೂರದಲ್ಲಿದ್ದು, ಅಲ್ಲಿಗೆ ತಮ್ಮೆಲ್ಲಾ ವಸ್ತುಗಳ್ನು ಟ್ರಕ್‌ನಲ್ಲಿ ತುಂಬಿಕೊಂಡು ತನ್ನೊಂದಿಗೆ ಹೊರಡುವಂತೆ ತನ್ನ ಪ್ರತಿ ಪತ್ನಿಯನ್ನೂ ಮದುವೆಯಾದ ಆರಂಭದಲ್ಲೇ ಮನವೊಲಿಸುತ್ತಿದ್ದ ಈ ಮಹಾನ್ ಫಟಿಂಗ. ಹೀಗೆ ಟ್ರಕ್‌ನಲ್ಲಿ ತುಂಬಿದ ವಸ್ತುಗಳನ್ನು ತೆಗೆದುಕೊಂಡು ಪರಾರಿಯಾಗುತ್ತಿದ್ದ ವಿಜಿಲಿಟೋ, ಆ ವಸ್ತುಗಳನ್ನು ಬಳಸಿದ ವಸ್ತುಗಳ ಮಾರುಕಟ್ಟೆಯಲ್ಲಿ ಸಿಕ್ಕ ದರದಲ್ಲಿ ಮಾರಾಟ ಮಾಡುತ್ತಿದ್ದ. ಇದೇ ಸಂದರ್ಭದಲ್ಲಿ ಹೊಸ ಮಿಕ್ಕವನ್ನು ಹುಡುಕುತ್ತಿದ್ದ.
ಈ ಬಗ್ಗೆ ಕಾನೂನು ಪಾಲನಾ ಪಡೆಗಳಿಗೆ ಅದೆಷ್ಟೇ ದೂರುಗಳು ಬಂದರೂ ಸಹ ತಪ್ಪಿಸಿಕೊಳ್ಳುತ್ತಲೇ ಇದ್ದ ವಿಜಿಲೆಟೋ. ಕೊನೆಗೆ ಆತನ 103/104ನೇ ಪತ್ನಿ(?) ಶರಾನ್ ಕ್ಲಾರ್ಕ್ ಫ್ಲಾರಿಡಾದಲ್ಲಿ ಪತ್ತೆ ಮಾಡಲು ಸಫಲಳಾಗಿದ್ದು, ಡಿಸೆಂಬರ್ 28, 1981ರಲ್ಲಿ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಶರಾನ್ ಬಳಸಿದ ವಸ್ತುಗಳ ಮಾರುಕಟ್ಟೆಯೊಂದರ ನಿರ್ವಾಹಕಿಯಾಗಿದ್ದರು.
ಜನವರಿ 1983ರಿಂದ ವಿಜಿಲೆಟೋನ ನ್ಯಾಯಾಂಗ ತನಿಖೆ ಆರಂಭಗೊಂಡಿದ್ದು, ಆತನಿಗೆ 34 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಲಾಗಿತ್ತು. ಇದರಲ್ಲಿ 28 ವರ್ಷಗಳ ಶಿಕ್ಷೆಯನ್ನು ವಂಚನೆ ಹಾಗೂ ಬಹುಪತ್ನಿತ್ವಗಳಿಗೆ ವಿಧಿಸಿದ್ದಲ್ಲದೇ $336,000 ದಂಡವನ್ನೂ ವಿಧಿಸಲಾಗಿತ್ತು. 1991ರಲ್ಲಿ ಮೃತಪಟ್ಟ ಈತ ತನ್ನ ಜೀವನದ ಕೊನೆಯ 8 ವರ್ಷಗಳನ್ನು ಅರಿಜ಼ೋನಾ ರಾಜ್ಯ ಕಾರಾಗೃಹದಲ್ಲಿ ಕಳೆದಿದ್ದಾನೆ.
“ತಾನೊಬ್ಬ ಹೆಣ್ಣಿನ ವಿಚಾರದಲ್ಲಿ ದೌರ್ಬಲ್ಯ ಹೊಂದಿದ್ದ ಹತಾಶ ರೊಮ್ಯಾಂಟಿಕ್ ವ್ಯಕ್ತಿ,” ಎಂದೇ ವಿಜಿಲಿಯೋಟೋ ತನ್ನ ಬಗ್ಗೆ ತಾನು ಹೇಳಿಕೊಳ್ಳುತ್ತಿದ್ದ.
https://twitter.com/GWR/status/1643610942989647874?ref_src=twsrc%5Etfw%7Ctwcamp%5Etweetembed%7Ctwterm%5E1643610942989647874%7Ctwgr%5Ecedfeb46f0038f3562e86c5a4fbecf20b105bbe4%7Ctwcon%5Es1_&ref_url=https%3A%2F%2Findianexpress.com%2Farticle%2Ftrending%2Ftrending-globally%2Fdo-you-know-story-of-man-who-married-over-100-times-8542293%2F