ನವದೆಹಲಿ: ವಕ್ಫ್ ತಿದ್ದುಪಡಿ ಕಾಯ್ದೆಯ ವಿರುದ್ಧ ಡಿಎಂಕೆ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದು, ಕಾನೂನು 20 ಕೋಟಿ ಮುಸ್ಲಿಮರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಹೇಳಿದೆ
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಪಕ್ಷವಾದ ದ್ರಾವಿಡ ಮುನ್ನೇತ್ರ ಕಳಗಂ(ಡಿಎಂಕೆ), ವಕ್ಫ್(ತಿದ್ದುಪಡಿ) ಕಾಯ್ದೆ 2025 ಅನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದೆ. ಡಿಎಂಕೆಯ ಉಪ ಪ್ರಧಾನ ಕಾರ್ಯದರ್ಶಿ ಎ. ರಾಜಾ ಅವರು ಈ ಅರ್ಜಿಯನ್ನು ಸಲ್ಲಿಸಿದ್ದಾರೆ. ಅವರು ಲೋಕಸಭಾ ಸಂಸದರು ಮತ್ತು ವಕ್ಫ್ ಮಸೂದೆಯ ಜಂಟಿ ಸಂಸದೀಯ ಸಮಿತಿಯ ಮಾಜಿ ಸದಸ್ಯರೂ ಆಗಿದ್ದಾರೆ.
ಈ ಕಾಯ್ದೆಯು ತಮಿಳುನಾಡಿನಲ್ಲಿ ಸುಮಾರು 50 ಲಕ್ಷ ಮುಸ್ಲಿಮರು ಮತ್ತು ದೇಶದ ಇತರ ಭಾಗಗಳಲ್ಲಿ 20 ಕೋಟಿ ಮುಸ್ಲಿಮರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಅರ್ಜಿದಾರರು ವಾದಿಸಿದ್ದಾರೆ.
ಏಪ್ರಿಲ್ 5 ರಂದು ರಾಷ್ಟ್ರಪತಿಗಳ ಅನುಮೋದನೆ ಪಡೆದ ಈ ಕಾಯ್ದೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಹಲವಾರು ಅರ್ಜಿಗಳು ದಾಖಲಾಗಿವೆ. ಕಾಂಗ್ರೆಸ್ ಸಂಸದ ಮೊಹಮ್ಮದ್ ಜಾವೇದ್ ಏಪ್ರಿಲ್ 4 ರಂದು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿ ಈ ಮಸೂದೆಯು ಮುಸ್ಲಿಂ ಸಮುದಾಯದ ಕಡೆಗೆ ತಾರತಮ್ಯವನ್ನುಂಟುಮಾಡುತ್ತದೆ ಮತ್ತು ಅವರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ವಾದಿಸಿದರು.
ಏಪ್ರಿಲ್ 4 ರಂದು, AIMIM ಮುಖ್ಯಸ್ಥ ಮತ್ತು ಹೈದರಾಬಾದ್ ಸಂಸದ ಅಸದುದ್ದೀನ್ ಓವೈಸಿ ಕೂಡ ವಕ್ಫ್ ತಿದ್ದುಪಡಿ ಮಸೂದೆ 2025 ರ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ಆಮ್ ಆದ್ಮಿ ಪಕ್ಷದ (AAP) ಶಾಸಕ ಅಮಾನತುಲ್ಲಾ ಖಾನ್ ಶನಿವಾರ ವಕ್ಫ್(ತಿದ್ದುಪಡಿ) ಮಸೂದೆ 2025 ಅನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಮಸೂದೆಯು ಮುಸ್ಲಿಮರ ಧಾರ್ಮಿಕ ಮತ್ತು ಸಾಂಸ್ಕೃತಿಕ ಸ್ವಾಯತ್ತತೆಯನ್ನು ಮೊಟಕುಗೊಳಿಸುತ್ತದೆ, ಅನಿಯಂತ್ರಿತ ಕಾರ್ಯನಿರ್ವಾಹಕ ಹಸ್ತಕ್ಷೇಪವನ್ನು ಸಕ್ರಿಯಗೊಳಿಸುತ್ತದೆ ಮತ್ತು ಅವರ ಧಾರ್ಮಿಕ ಮತ್ತು ದತ್ತಿ ಸಂಸ್ಥೆಗಳನ್ನು ನಿರ್ವಹಿಸಲು ಅಲ್ಪಸಂಖ್ಯಾತರ ಹಕ್ಕುಗಳನ್ನು ದುರ್ಬಲಗೊಳಿಸುತ್ತದೆ ಎಂದು ದೂರಿದ್ದಾರೆ.
ಸಂಸತ್ತು ಅಂಗೀಕರಿಸಿದ ವಕ್ಫ್(ತಿದ್ದುಪಡಿ) ಮಸೂದೆ- 2025ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈಗಾಗಲೇ ಒಪ್ಪಿಗೆ ನೀಡಿದ್ದಾರೆ.