ಬೆಂಗಳೂರು: ಪಕ್ಷದ ನಾಯಕರು, ಮುಖಂಡರ ಒತ್ತಾಯದ ಮೇರೆಗೆ ಬೆಂಗಳೂರು ಹಾಲು ಒಕ್ಕೂಟದ ಕನಕಪುರ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿದ್ದೇನೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಡಿ.ಕೆ.ಸುರೇಶ್, ಸಧ್ಯಕ್ಕೆ ಕೆಎಂಎಫ್ ವಿಚಾರ ಚರ್ಚೆಯಲ್ಲಿಲ್ಲ. ಕಳೆದ 10 ವರ್ಷಗಳಿಂದ ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷರಾಗಿ, ನಿರ್ದೇಶಕರುಗಳಾಗಿ ನಮ್ಮ ಪಕ್ಷದ ಮುಖಂಡರು ಸೇವೆ ಸಲ್ಲಿಸಿದ್ದಾರೆ. ಹಾಗಾಗಿ ಇದರಲ್ಲಿ ವಿಶೇಷತೆ ಏನೂ ಇಲ್ಲ. ನಾನು ಅವರೆಲ್ಲರ ಜೊತೆ ಇರಬೇಕು ಎಂದು ಒತ್ತಾಯ ಮಾಡಿದ ಕಾರಣಕ್ಕೆ ಜೊತೆಯಾಗಿ ನಿಂತಿದ್ದೇನೆ ಎಂದರು.
ರಾಮನಗರ ಜಿಲ್ಲೆಯ ಶಾಸಕರು, ಮಾಜಿ ನಿರ್ದೇಶಕರು, ಅಧ್ಯಕ್ಷರುಗಳು, ಅನೇಕ ಜಿಲ್ಲೆಯ ನಾಯಕರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದಾಗ ನಾನು ಅವರ ಮಾತುಗಳಿಗೆ ಪಕ್ಷದ ಕಾರ್ಯಕರ್ತನಾಗಿ ತಲೆಬಾಗಬೇಕಾಗುತ್ತದೆ. ಹಿರಿಯರ ಮಾತುಗಳನ್ನು ಸ್ವೀಕಾರ ಮಾಡಿದ್ದೇನೆ, ಕಾದು ನೋಡೋಣ ಎಂದರು.
ಬಿಡದಿ ಟೌನ್ ಶಿಪ್ ಕುರಿತು ಆರ್.ಅಶೋಕ್ ಸೇರಿದಂತೆ ಅನೇಕರಿಂದ ಭೂಕಬಳಿಕೆ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ಆರ್.ಅಶೋಕ್ ಅವರು ವಿರೋಧ ಪಕ್ಷದ ನಾಯಕರು. ಅವರಿಗೆ ಎಲ್ಲಾ ಮಾಹಿತಿಯನ್ನು ಪಡೆಯಲು ಯೋಗ್ಯತೆ ಮತ್ತು ಅರ್ಹತೆಯಿದೆ. ಒಂದು ವೇಳೆ ಇಲ್ಲ ಎಂದರೆ ನಾನು ಅವರಿಗೆ ಮಾಹಿತಿ ನೀಡುತ್ತೇನೆ. ಕಬಳಿಕೆ ಕುರಿತು ನಾನು ಮಾತನಾಡಬೇಕು ಎಂದರೆ ಉತ್ತರಹಳ್ಳಿಯ ಬಗ್ಗೆ ಮಾತನಾಡಬೇಕಾಗುತ್ತದೆ ಎಂದು ತಿರುಗೇಟು ನೀಡಿದರು.