ಬೆಂಗಳೂರು: 2025- 26 ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಅನ್ವಯವಾಗುವಂತೆ ರಾಜ್ಯದಲ್ಲಿನ ಸರ್ಕಾರಿ ಮೆಡಿಕಲ್ ಕಾಲೇಜುಗಳಲ್ಲಿ 420 ಪಿಜಿ ಸೀಟುಗಳು ಹೆಚ್ಚಳವಾಗಿವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ್ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.
ಪಿಜಿ ಹಂತದಲ್ಲಿ ಒಟ್ಟು 572 ಸೀಟುಗಳನ್ನು ಮಂಜೂರು ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. 422 ಸೀಟುಗಳು ಮಂಜೂರಾಗಿವೆ. ಪ್ರಿ ಕ್ಲಿನಿಕಲ್, ಪ್ಯಾರಾ ಕ್ಲಿನಿಕಲ್ ಮತ್ತು ಕ್ಲಿನಿಕಲ್ ವಿಭಾಗಗಳಲ್ಲಿ ಈ 422 ಹೆಚ್ಚುವರಿ ಸೀಟುಗಳನ್ನು ಹಂಚಿಕೆ ಮಾಡಲಾಗುವುದು ಎಂದು ಹೇಳಿದ್ದಾರೆ.
ರಾಜ್ಯಕ್ಕೆ ಈಗಾಗಲೇ 450 ವೈದ್ಯಕೀಯ ಸೀಟುಗಳನ್ನು ಹೆಚ್ಚಳ ಮಾಡಿ ರಾಷ್ಟ್ರೀಯ ವೈದ್ಯಕೀಯ ಆಯೋಗ ಆದೇಶಿಸಿತ್ತು. ಈಗ ಪಿಜಿ ಸೀಟುಗಳ ಸಂಖ್ಯೆಯು ಹೆಚ್ಚಳವಾಗಿದ್ದು, ರಾಜ್ಯದ ವಿದ್ಯಾರ್ಥಿಗಳಿಗೆ ದೀಪಾವಳಿ ಉಡುಗೊರೆ ಸಿಕ್ಕಂತಾಗಿದೆ. ಈ ಶೈಕ್ಷಣಿಕ ವರ್ಷದಲ್ಲಿ ರಾಜ್ಯಕ್ಕೆ 2116 ಸೀಟುಗಳು ಲಭ್ಯವಿರುತ್ತವೆ ಎಂದು ಹೇಳಿದ್ದಾರೆ.