ಬಳ್ಳಾರಿ: ರಾಜ್ಯ ಸರ್ಕಾರವು 2 ವ಼ರ್ಷ ಪೂರೈಸಿದ ಹಿನ್ನೆಲೆಯಲ್ಲಿ ಇದೇ ಮೇ 20 ರಂದು ವಿಜಯನಗರ ಜಿಲ್ಲೆಯ ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಸಮರ್ಪಣಾ ಸಂಕಲ್ಪ ಸಮಾವೇಶ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು.
ಕಾರ್ಯಕ್ರಮ ಆಯೋಜನೆ ಕುರಿತಂತೆ, ಶುಕ್ರವಾರ ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣಕ್ಕೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ನಮ್ಮ ಸರ್ಕಾರವು ಎರಡು ವರ್ಷ ಪೂರೈಸುತ್ತಿರುವ ಹಿನ್ನಲೆಯಲ್ಲಿ ನುಡಿದಂತೆ ನಡೆದ ಸರ್ಕಾರ ನಮ್ಮದಾಗಿದ್ದು, ಇನ್ನುಮುಂದೆಯೂ ನಡೆಯುತ್ತೇವೆ ಎಂದು ಜನರಿಗೆ ತಿಳಿಯಪಡಿಸಲು ಮೇ 20 ರಂದು ನಡೆಯುವ ಸಮರ್ಪಣಾ ಸಂಕಲ್ಪ ಸಮಾವೇಶ ಕಾರ್ಯಕ್ರಮದಲ್ಲಿ ಹಾಡಿ, ಹಟ್ಟಿ ಮತ್ತು ತಾಂಡಾ ಪ್ರದೇಶದ ಕನಿಷ್ಠ 1.03 ಲಕ್ಷ ಫಲಾನುಭವಿಗಳಿಗೆ ಕಂದಾಯ ಇಲಾಖೆಯಿಂದ ಹಕ್ಕುಪತ್ರಗಳನ್ನು ವಿತರಣೆ ಮಾಡಲಾಗುತ್ತದೆ. ಇದರಿಂದ ಜನರಿಗೆ ಸೌಲಭ್ಯ ಸಮರ್ಪಿಸುವ ಸಮರ್ಪಣಾ ಸಂಕಲ್ಪ ಸಮಾವೇಶ ಕಾರ್ಯಕ್ರಮ ಇದಾಗಿದೆ. ಕಾರ್ಯಕ್ರಮಕ್ಕೆ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ವಿರೋಧ ಪಕ್ಷದ ನಾಯಕರು, ಶಾಸಕರುಗಳನ್ನು ಸಹ ಆಹ್ವಾನಿಸಲಾಗಿದೆ. ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಫಲಾನುಭವಿಗಳನ್ನು ಕರೆತರಲಾಗುವುದು. ಕನಿಷ್ಠ 3 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜನಸ್ತೋಮ ಸೇರುವ ನಿರೀಕ್ಷೆ ಹೊಂದಲಾಗಿದೆ. ಇದಕ್ಕೆ ಬೇಕಾದ ಅಗತ್ಯ ವ್ಯವಸ್ಥೆ ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ವಸತಿ, ವಕ್ಫ್ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಬಿ. ಝೆಡ್.ಜಮೀರ್ ಅಹ್ಮದ್ ಖಾನ್, ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವ ಡಾ.ಹೆಚ್.ಕೆ.ಪಾಟೀಲ್, ಕಂದಾಯ ಸಚಿವ ಕೃಷ್ಣ ಬೈರೇಗೌಡ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ಕೃಷಿ ಸಚಿವ ಎನ್.ಚಲುವರಾಯಸ್ವಾಮಿ, ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್, ಸಣ್ಣನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಭೋಸರಾಜು, ಸಂಸದ ಈ.ತುಕಾರಾಮ್, ಶಾಸಕರಾದ ಹೆಚ್.ಆರ್.ಗವಿಯಪ್ಪ, ಬಿ.ನಾಗೇಂದ್ರ, ಜೆ.ಎನ್.ಗಣೇಶ್, ಎಂ.ಪಿ.ಲತಾ, ಶ್ರೀನಿವಾಸ ನಾಯ್ಕ ಮತ್ತು ಜಿಲ್ಲಾಧಿಕಾರಿಗಳಾದ ಎಂ.ಎಸ್.ದಿವಾಕರ, ಪ್ರಶಾಂತ್ ಕುಮಾರ್ ಮಿಶ್ರಾ, ಜಿಪಂ ಸಿಇಒ ಮಹಮ್ಮದ್ ಹ್ಯಾರೀಸ್ ಸುಮೈರ್, ಮೊಹಮದ್ ನೊಂಗ್ಜಾಯ್ ಅಕ್ರಂ ಅಲಿ ಪಾಷಾ, ಎಸ್ಪಿಗಳಾದ ಡಾ.ಶೋಭರಾಣಿ.ವಿ.ಜೆ., ಶ್ರೀಹರಿಬಾಬು ಸೇರಿದಂತೆ ಅನೇಕರು ಹಾಜರಿದ್ದರು.