ರಾಜ್ಯದಲ್ಲಿ ‘ಜಾತಿ ಗಣತಿ’ ಸಮೀಕ್ಷಾ ಕಾರ್ಯಕ್ಕೆ ಹಾಜರಾಗದ ಶಿಕ್ಷಕರ ವಿರುದ್ಧ ಶಿಸ್ತು ಕ್ರಮ : ಸರ್ಕಾರದಿಂದ ಖಡಕ್ ಆದೇಶ

ಬೆಂಗಳೂರು : ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಕರ್ನಾಟಕ ರಾಜ್ಯದ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಬಗ್ಗೆ ಸಮೀಕ್ಷೆಯನ್ನು ಕೈಗೊಳ್ಳಲು ಸರ್ಕಾರದ ಅನುಮೋದನೆ ನೀಡಿ ಆದೇಶಿಸಿದೆ.

ಮೇಲೆ ಓದಲಾದ ಕ್ರಮ ಸಂಖ್ಯೆ:(2)ರ ಪತ್ರಗಳಲ್ಲಿ ಮುಖ್ಯ ಆಯುಕ್ತರು, ಗ್ರೇಟರ್ ಬೆಂಗಳೂರು ಪ್ರಾಧಿಕಾರ ಇವರು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ರಾಜ್ಯದ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳನ್ನು ಗುರುತಿಸುವ ಸಲುವಾಗಿ ಸಮೀಕ್ಷೆಯನ್ನು ನಡೆಸಲು ಉದ್ದೇಶಿಸಲಾಗಿದೆ. ಅದರಂತೆ, ಸಮೀಕ್ಷಾ ಕಾರ್ಯಕ್ಕೆ ನಿಯೋಜಿಸಲ್ಪಡುವ ಗ್ರೂಪ್-‘ಬಿ’, ‘ಸಿ’ ಮತ್ತು ‘ಡಿ’ ವೃಂದದ ಅಧಿಕಾರಿ / ನೌಕರರುಗಳು ಸಮೀಕ್ಷಾ ಕಾರ್ಯದಲ್ಲಿ ಪಾಲ್ಗೊಳ್ಳದಿದ್ದಲ್ಲಿ ಅಥವಾ ಪಾಲ್ಗೊಂಡು ಕರ್ತವ್ಯ ನಿರ್ವಹಣೆ ಮಾಡದೇ ಇರುವಂತಹ ಅಧಿಕಾರಿ / ನೌಕರರುಗಳ ವಿರುದ್ಧ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1957ರನ್ವಯ ಶಿಸ್ತುಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ.

ಈ ಹಿಂದೆ ಪರಿಶಿಷ್ಟ ಜಾತಿಯ ಸಮೀಕ್ಷೆ-2025ರ ಕಾರ್ಯಕ್ಕಾಗಿ ನಿಯೋಜಿಸಲಾಗಿದ್ದ ಹೆಚ್ಚಿನ ಸಂಖ್ಯೆಯ ನೌಕರರುಗಳು ಸಮೀಕ್ಷಾ ಕಾರ್ಯಕ್ಕೆ ಹಾಜರಾಗಿರುವುದಿಲ್ಲ ಮತ್ತು ತಮ್ಮ ಕರ್ತವ್ಯಗಳನ್ನು ನಿರ್ವಹಿಸಿರುವುದಿಲ್ಲ. ಇದರಿಂದಾಗಿ ಸಮೀಕ್ಷಾ ಕಾರ್ಯವನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಸಾಧ್ಯವಾಗಿರುವುದಿಲ್ಲ ಹಾಗೂ ಘಟನೋತ್ತರವಾಗಿ ನೌಕರರುಗಳ ವಿರುದ್ಧ ಕ್ರಮ ಕೈಗೊಳ್ಳುವುದು ಕಾರ್ಯಸಾಧ್ಯವಾಗುವುದಿಲ್ಲ.
ಆದ್ದರಿಂದ, ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯಕ್ಕಾಗಿ ಗಣತಿದಾರರಾಗಿ ಹಾಗೂ ಮೇಲ್ವಿಚಾರಕರಾಗಿ ನಿಯೋಜಿಸಲ್ಪಡುವ ಸರ್ಕಾರ, ನಿಗಮ / ಮಂಡಳಿಗಳ ಅಧಿಕಾರಿ / ನೌಕರರುಗಳ ವಿರುದ್ಧ ಕರ್ನಾಟಕ ನಾಗರೀಕ ಸೇವಾ (ನಡತೆ) ನಿಯಮಗಳು, 2021ರಡಿ ಹಾಗೂ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1957ರನ್ವಯ ಶಿಸ್ತುಕ್ರಮ ಮತ್ತು ದಂಡನೆ ವಿಧಿಸುವ ಅಧಿಕಾರವನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರಿಗೆ ಪ್ರತ್ಯಾಯೋಜಿಸುವಂತೆ ಕೋರಿ ಪ್ರಸ್ತಾವನೆ ಸಲ್ಲಿಸಿರುತ್ತಾರೆ.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ರಾಜ್ಯದ ಎಲ್ಲಾ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಕುರಿತು ಕೈಗೊಳ್ಳಲಾಗಿರುವ ಸಮೀಕ್ಷಾ ಕಾರ್ಯಕ್ಕೆ ನಿಯೋಜಿಸಲ್ಪಡುವ ಇತರೆ ಇಲಾಖೆ, ನಿಗಮ ಮತ್ತು ಮಂಡಳಿಗಳ ಅಧಿಕಾರಿ / ನೌಕರರುಗಳು ಸಮೀಕ್ಷಾ ಕಾರ್ಯದ ಅವಧಿಯಲ್ಲಿ ಕರ್ತವ್ಯಕ್ಕೆ ಹಾಜರಾಗದೇ ಇದ್ದಲ್ಲಿ ಅಥವಾ ಹಾಜರಾಗಿ ಕರ್ತವ್ಯಗಳನ್ನು ಸಮರ್ಪಕವಾಗಿ ನಿರ್ವಹಿಸದೇ ಇದ್ದಲ್ಲಿ ಅಂತಹವರುಗಳ ವಿರುದ್ಧ ಕರ್ನಾಟಕ ನಾಗರೀಕ ಸೇವಾ (ನಡತೆ) ನಿಯಮಗಳು, 2021ರಡಿ ಹಾಗೂ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ), ನಿಯಮಗಳು, 1957ರ ನಿಯಮ-9ರಡಿ ಶಿಸ್ತುಕ್ರಮ ಜರುಗಿಸಲು ಕರ್ತವ್ಯಲೋಪ ಎಸಗಿದವರನ್ನು ನಿಯಮ-10ರಡಿ ಅಮಾನತ್ತಿನಲ್ಲಿಡಲು ಸಹ ಮುಖ್ಯ ಆಯುಕ್ತರು, ಗ್ರೇಟರ್ ಬೆಂಗಳೂರು ಪ್ರಾಧಿಕಾರ ಇವರಿಗೆ ಅಧಿಕಾರ ಪ್ರತ್ಯಾಯೋಜಿಸಿ ಆದೇಶಿಸಿದೆ.

ಮುಂದುವರೆದು, ಸಮೀಕ್ಷಾ ಕಾರ್ಯದ ಸಮಯದಲ್ಲಿ ಸಮೀಕ್ಷಾ ಕಾರ್ಯದ ಉದ್ದೇಶಕ್ಕಾಗಿ ವಿವಿಧ ಇಲಾಖೆ / ನಿಗಮ / ಮಂಡಳಿಗಳ ಅಧಿಕಾರಿ / ಸಿಬ್ಬಂದಿಗಳನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ನಿಯೋಜಿಸಲಾಗಿದ್ದು, ನಿಯೋಜಿತ ಅಧಿಕಾರಿ / ಸಿಬ್ಬಂದಿಗಳು ಮುಖ್ಯ ಆಯುಕ್ತರು, ಗ್ರೇಟರ್ ಬೆಂಗಳೂರು ಪ್ರಾಧಿಕಾರ ಇವರ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸತಕ್ಕದ್ದು.ಈ ಆದೇಶವನ್ನು ಸಚಿವ ಸಂಪುಟದ ಪ್ರಕರಣ ಸಂಖ್ಯೆ:ಸಿ-830/2025, ದಿನಾಂಕ:25-09-2025 ರಂದು ಕೈಗೊಂಡಿರುವ ನಿರ್ಣಯದನ್ವಯ ಹೊರಡಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read