ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಬಂಧನದ ಹೆಸರಿನಲ್ಲಿ ನಡೆಯುತ್ತಿರುವ ವಂಚನೆಗಳು ಹೆಚ್ಚಾಗುತ್ತಿವೆ. ಈ ರೀತಿಯ ವಂಚಕರು ಜನರನ್ನು ಹೆದರಿಸಿ ಅವರಿಂದ ಲಕ್ಷಾಂತರ ರೂಪಾಯಿ ಕಳವು ಮಾಡುತ್ತಿದ್ದಾರೆ. ಈ ಬಗ್ಗೆ ಎಚ್ಚರಿಕೆ ನೀಡುವ ಒಂದು ಉತ್ತಮ ಉದಾಹರಣೆ ಶಿವ ಅರೋರಾ ಅವರ ಘಟನೆ.
ಶಿವ ಅರೋರಾ ಅವರಿಗೆ ವಾಟ್ಸಾಪ್ ಕರೆ ಬಂದಿತ್ತು. ಕರೆ ಮಾಡಿದಾತ ಪೊಲೀಸ್ ಅಧಿಕಾರಿಯ ಫೋಟೋವನ್ನು ಪ್ರೊಫೈಲ್ ಪಿಕ್ಚರ್ ಆಗಿ ಇಟ್ಟುಕೊಂಡಿದ್ದ. ಕರೆ ಮಾಡಿದವನು ಶಿವ ಅರೋರಾ ಅವರ ಮಗನನ್ನು ಬಂಧಿಸಲಾಗಿದೆ ಎಂದು ಹೇಳಿದ್ದಲ್ಲದೇ ಆತನನ್ನು ಬಿಡಿಸಿಕೊಳ್ಳಲು ಹಣ ಕೊಡಬೇಕೆಂಬ ಬೇಡಿಕೆಯಿಟ್ಟಿದ್ದ.
ಶಿವ ಅರೋರಾ ಅವರು ಬುದ್ಧಿವಂತಿಕೆಯಿಂದ ವರ್ತಿಸಿದ್ದು, ವಂಚಕನು ತಮ್ಮ ಮಗನೊಂದಿಗೆ ಮಾತನಾಡಿಸುತ್ತೇನೆ ಎಂದು ಹೇಳಿದಾಗ, ತಮ್ಮದೇ ಹೆಸರನ್ನು ತನ್ನ ಮಗನ ಹೆಸರು ಎಂದು ಹೇಳಿದ್ದಾರೆ. ವಂಚಕ ಗೊಂದಲಕ್ಕೊಳಗಾಗಿದ್ದು, ನಂತರ ಮಗನ ತಾಯಿಯೊಂದಿಗೆ ಮಾತನಾಡಿಸಲು ಹೇಳಿದಾಗ, ಶಿವ ಅರೋರಾ ಅವರು ತಮ್ಮ ಪತ್ನಿಗೆ ಫೋನ್ ನೀಡಿ, ಪೊಲೀಸರು ಶಿವನನ್ನು ಬಂಧಿಸಿದ್ದಾರೆ ಎಂದು ಹೇಳುವಂತೆ ಮಾಡಿದ್ದಾರೆ.
ವಂಚಕ ಮಗನಂತೆ ಅಳುತ್ತಾ ತಾಯಿಯೊಂದಿಗೆ ಮಾತನಾಡಲು ಪ್ರಾರಂಭಿಸಿದ್ದು, ಆದರೆ ಶಿವ ಅರೋರಾ ಅವರ ಕುಟುಂಬಕ್ಕೆ ಇದು ವಂಚನೆ ಎಂದು ಅರ್ಥವಾಗಿ ನಗಲು ಪ್ರಾರಂಭಿಸಿದ್ದಾರೆ. ವಂಚಕನಿಗೆ ತನ್ನ ವಂಚನೆ ಬಯಲಾಗಿದೆ ಎಂದು ಅರ್ಥವಾದ ನಂತರ ಕರೆ ಕಟ್ ಮಾಡಿದ್ದಾರೆ.