ಬೆಂಗಳೂರು: ಮಾಜಿ ಶಾಸಕ ಗುಂಡಪ್ಪ ವಕೀಲ್ ಅವರಿಗೆ ಡಿಜಿಟಲ್ ಅರೆಸ್ಟ್ ಹೆಸರಲ್ಲಿ ಸೈಬರ್ ವಂಚಕರು ವಂಚಿಸಿದ್ದು, ಬರೋಬ್ಬರಿ 30 ಲಕ್ಷ ಹಣ ದೋಚಿರುವ ಘಟನೆ ನಡೆದಿದೆ.
ಆಗಸ್ಟ್ 12ರಂದು ಸಿಬಿಐ ಅಧಿಕಾರಿಗಳ ಹೆಸರಲ್ಲಿ ಮಾಜಿ ಶಾಸಕರಿಗೆ ವಂಚಕರು ಕರೆ ಮಾಡಿದ್ದಾರೆ. ನೀವು ನರೇಶ್ ಗೋಯಲ್ ಮನಿ ಲಾಂಡರಿಂಗ್ ಕೇಸ್ ನಲ್ಲಿ ಭಾಗಿಯಾಗಿದ್ದೀರಿ ಎಂದು ಬೆದರಿಕೆ ಹಾಕಿದ್ದಾರೆ. ಬಳಿಕ ಆಗಸ್ಟ್ 13ರಂದು ಸಿಬಿಐ ಡಿಸಿಪಿ ಎಂದು ಮತ್ತೆ ಕರೆ ಮಾಡಿದ ಮತ್ತೋರ್ವ ವಂಚಕ, ನೀವು ಡಿಜಿಟಲ್ ಅರೆಸ್ಟ್ ಆಗಿದ್ದೀರಿ. ಯಾವ ಕಾರಣಕ್ಕೂ ಕಾಲ್ ಕಟ್ ಮಾಡುವಂತಿಲ್ಲ ಎಂದು ಹೇಳಿ ಆನ್ ಲೈನ್ ನಲ್ಲಿ ಜಡ್ಜ್ ಮುಂದೆ ಹಾಜರುಪಡಿಸುವುದಾಗಿ ಹೇಳಿ ನಕಲಿ ಜಡ್ಜ್ ಮುಂದೆ ಹಾಜರುಪಡಿಸಿದ್ದಾರೆ. ಖದೀಮರು ಕೋರ್ಟ್ ಹಾಲ್ ರೀತಿಯಲ್ಲಿಯೇ ಸೆಟ್ ಹಾಕಿಕೊಂಡು ಮೋಸ ಮಾಡಿದ್ದಾರೆ.
ತನ್ನದೇನೂ ತಪ್ಪಿಲ್ಲ ಎಂದು ಮುಚ್ಚಳಿಕೆ ಬರೆದುಕೊಡಲು 10 ಲಕ್ಷ ಹಣ ಹಾಕುವಂತೆ ಹಣ ವರ್ಗಾಯಿಸಿಕೊಂಡಿದ್ದಾರೆ. ಬಳಿಕ ಪ್ರಾಪರ್ಟಿ ತನಿಖೆಗೆ ಎಂದು 20 ಲಕ್ಷ ಡೆಪಾಸಿಟ್ ಎಂದು ಹಣ ವರ್ಗಾಯಿಸಿಕೊಂಡಿದ್ದಾರೆ. ಹೀಗೆ ವಂಚಕರ ಮಾತು ನಂಬಿ ಗುಂಡಪ್ಪ ವಕೀಲ್ ಹಂತ ಹಂತವಾಗಿ ಹಣ ವರ್ಗಾಯಿಸಿ ಒಟ್ಟು 30.99 ಲಕ್ಷ ಹಣ ಕಳೆದುಕೊಂಡಿದ್ದಾರೆ. ತನಿಖೆ ಬಳಿಕ ಹಣವನ್ನು ವಾಪಸ್ ಕೊಡುತ್ತೇವೆ ಎಂದು ನಂಬಿಸಿದ್ದಾರೆ. ಇಷ್ಟುದಿನವಾದರೂ ಹಣ ಮರಳದಿದ್ದಾಗ ಅನುಮಾನಗೊಂಡ ಗುಂಡಪ್ಪ ವಕೀಲ್ ಬೆಂಗಳೂರು ಸಿಸಿಬಿ ಸೈಬರ್ ಕ್ರೈಂ ಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.