ಬೆಂಗಳೂರು: ಡಿಜಿಟಲ್ ಅರೆಸ್ಟ್ ಹೆಸರಲ್ಲಿ ಸೈಬರ್ ವಂಚಕರು ಮಹಿಳಾ ವಿಜ್ಞಾನಿ ಖಾತೆಯಿಂದ ಬರೋಬ್ಬರಿ 8.8 ಲಕ್ಷ ರೂಪಾಯಿ ದೋಚಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಐಐಎಸ್ ಸಿಯು ಹೌಸಿಂಗ್ ಕಾಲೋನಿ ನಿವಾಸಿ ಮಹಿಳಾ ವಿಜ್ಞಾನಿ ಡಾ.ಸಂಧ್ಯಾ ಅವರಿಗೆ ಕರೆ ಮಾಡಿರುವ ಸೈಬರ್ ವಂಚಕರು, ಸಿಬಿಐ ಅಧಿಕಾರಿಗಳು ಎಂದು ಹೇಳಿಕೊಂಡಿದ್ದಾರೆ. ಬಳಿಕ ನೀವು ಮಾನವ ಕಳ್ಳ ಸಾಗಾಣೆಯಲ್ಲಿ ಭಾಗಿಯಾಗಿದ್ದೀರಿ ಎಂದು ಬೆದರಿಕೆ ಹಾಕಿದ್ದಾರೆ. ನಿಮ್ಮ ಮೊಬೈಲ್ ನಂಬರ್ ನ್ನು ಬೇರೆ ಬೇರೆ ಕಡೆಗಳಲ್ಲಿ ಬಳಸಲಾಗಿದೆ ಎಂದಿದ್ದಾರೆ. ಅದಕ್ಕೆ ಸಂಧ್ಯಾ ಅವರು ತಾನು ಅಂತಹ ಯಾವುದೇ ಕೃತ್ಯದಲ್ಲಿ ಭಾಗಿಯಾಗಿಲ್ಲ ಎಂದಿದ್ದಾರೆ.
ಮತ್ತೆ ಕರೆ ಮಾಡಿರುವ ಇನ್ನೋರ್ವ ವಂಚಕ, ನೀವು ಮಾನವಕಳ್ಳ ಸಾಗಾಣೆಯಲ್ಲಿ ಭಾಗಿಯಾಗಿದ್ದು, ಸುಪ್ರೀಂ ಕೋರ್ಟ್ ಗೆ ಕೆಲ ದಾಖಲೆಗಳನ್ನು ತೋರಿಸಬೇಕು. ಸಿಬಿಐ ಅಧಿಕಾರಿಗಳು ನಿಮ್ಮನ್ನು ಬಂಧಿಸುತ್ತಾರೆ ಎಂದಿದ್ದಾನೆ. ಇದರಿಂದ ಕಂಗಾಲಾದ ಸಂಧ್ಯಾ, ತಾನು ಯಾವುದೇ ಅಕ್ರಮದಲ್ಲಿ ಭಾಗಿಯಾಗಿಲ್ಲ ಎಂದು ಸಾಕಷ್ಟುಬಾರಿ ಮನವೊಲಿಸಲು ಯತ್ನಿಸಿದ್ದಾರೆ. ನೀವು ಈ ಪ್ರಕರಣದಿಂದ ಪಾರಾಗಲು ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಬೇಕು ಎಂದಿದ್ದಾರೆ. ಬರೋಬ್ಬರಿ 8.8 ಲಕ್ಷ ರೂಪಾಯಿ ಹಣವನ್ನು ವರ್ಗಾಯಿಸಿಕೊಂಡಿದ್ದಾರೆ.
ಘಟನೆ ಬಳಿಕ ಡಾ.ಸಂಧ್ಯಾ ಬೆಂಗಳೂರಿನ ಸಿಇಎನ್ ಕೇಂದ್ರ ವಿಭಾಗ ಠಾಣೆಗೆ ದೂರು ನೀಡಿದ್ದಾರೆ.