ಮಂಗಳೂರು: ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅನಾಮಿಕ ದೂರುದಾರನನ್ನು ಎಸ್ ಐಟಿ ವಶಕ್ಕೆ ಪಡೆಯುವಂತೆ ಬೆಳ್ತಂಗಡಿ ನಿವಾಸಿಯೊಬ್ಬರು ಎಸ್ ಐಟಿಗೆ ಪತ್ರ ಬರೆದಿದ್ದಾರೆ.
ಬೆಳ್ತಂಗಡಿ ನಿವಾಸಿ ಶ್ಯಾಮ ಸುಂದರ್ ಎಂಬುವವರು ಎಸ್ ಐಟಿಗೆ ಪತ್ರ ಬರೆದು, ಇಷ್ಟೊಂದು ಗಂಭೀರ ಪ್ರಕರಣದಲ್ಲಿ ದೂರುದಾರ ಅನಾಮಿಕ ವ್ಯಕ್ತಿಯನ್ನು ಎಸ್ ಐಟಿ ತನ್ನ ಸುಪರ್ದಿಗೆ ಪಡೆಯದೇ ವಕೀಲರು, ಖಾಸಗಿ ವ್ಯಕ್ತಿಗಳ ಜೊತೆ ಬಿಟ್ಟರೆ ನಿಸ್ಪಕ್ಷಪಾತ ತನಿಖೆ ನಡೆಸಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.
ಅನಾಮಿಕ ವ್ಯಕ್ತಿ ತಾನು ಶವಗಳನ್ನು ಹೂತಿಟ್ಟಿರುವುದಾಗಿ 13 ಸ್ಥಳಗಳನ್ನು ಈಗಾಗಲೇ ತೋರಿಸಿದ್ದಾನೆ. ಆತ ಗುರುತಿಸಿದ 12 ಸ್ಥಳಗಲ್ಲಿ ಎಸ್ ಐಟಿ ತಂಡ ತನಿಖೆ ನಡೆಸಿದೆ. ಆರಂಭದಲ್ಲಿ ಅನಾಮಿಕ ವ್ಯಕ್ತಿಯನ್ನು ವಕೀಲರ ಜೊತೆ ಮಂಗಳೂರಿನ ರೂಮೊಂದರಲ್ಲಿ ನೆಲೆಸಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು, ಆದರೆ ಕೆಲ ದಿನಗಳಿಂದ ಅನಾಮಿಕ ವ್ಯಕ್ತಿ ಉಜಿರೆಯ ಖಾಸಗಿ ವ್ಯಕ್ತಿಯೋರ್ವನ ಮನೆಯಲ್ಲಿ ಉಳಿದುಕೊಂಡಿರುವ ಬಗ್ಗೆ ಮಾಅಹಿತಿ ಲಭ್ಯವಾಗಿದೆ. ಇಂತಹ ಗಂಭೀರ ಪ್ರಕರಣದಲ್ಲಿ ಅನಾಮಿಕ ವ್ಯಕ್ತಿಯನ್ನು ಎಸ್ ಐಟಿ ಸುಪರ್ದಿಯಲ್ಲಿ ಇಟ್ಟುಕೊಳ್ಳಬೇಕಿತ್ತು. ಆದರೆ ಹಾಗೆ ಮಾಡದೇ ಖಾಸಗಿ ವ್ಯಕ್ತಿಗಳು, ವಕೀಲರ ಜೊತೆ ಬಿಟ್ಟರೆ ಸೂಕ್ತ ತನಿಖೆ ಹೇಗೆ ಸಾಧ್ಯ? ಹೀಗಾಗಿ ತಕ್ಷಣ ಅನಾಮಿಕ ವ್ಯಕ್ತಿಯನ್ನು ಎಸ್ ಐಟಿ ತಮ್ಮ ಸುಪರ್ದಿಗೆ ಪಡೆಯಬೇಕು. ನಿಸ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಮನವ್ ಪತ್ರದ ಬಗ್ಗೆ ಪ್ರತಿಕ್ರಿಯಿಸಿರುವ ಎಸ್ ಐಟಿ ನಿಮ್ಮ ಅರ್ಜಿಯನ್ನು ಸ್ವೀಕರಿಸಿ ಪರಿಗಣಿಸುತ್ತೇವೆ. ಯಾವುದೇ ಅಪರಾಧ ಕೃತ್ಯದ ಬಗ್ಗ್ಗೆ ಮಾಹಿತಿ ಅಥವಾ ದೂರನ್ನು ಸ್ಥಳೀಯ ಪೊಲೀಸ್ ಠಾಣೆಗೆ ಸಲ್ಲಿಸಬೇಕು ಎಂದು ತಿಳಿಸಿದೆ.