ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐಟಿ ಶೋಧಕಾರ್ಯ ಮುಂದುವರೆಸಿದ್ದು, ಈವರೆಗೂ ಗುರುತಿಸದ ಸ್ಥಳದಲ್ಲಿ ಎಸ್ ಐಟಿ ತಂಡ ಶೋಧಕಾರ್ಯ ಚುರುಕುಗೊಳಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಧರ್ಮಸ್ಥಳದ ಬಂಗ್ಲಗುಡ್ಡದ ಸ್ಥಳದಲ್ಲಿ ದೂರುದಾರ ತೋರಿದ್ದ 11ನೇ ಪಾಯಿಂಟ್ ನ ಬಳಿಯಿರುವ ಸ್ಥಳದಲ್ಲಿ ಅಸ್ಥಿಪಂಜರಕ್ಕಾಗಿ ಶೋಧಕಾರ್ಯ ನಡೆಸಲಾಗುತ್ತಿದೆ. ದೂರುದಾರ ಶವಗಳನ್ನು ಹೂತಿಟ್ಟುರುವುದಾಗಿ ಈವರೆಗೆ 13 ಸ್ಥಳಗಳನ್ನು ತೋರಿಸಿದ್ದ. ಈ ನಿಟ್ಟಿನಲ್ಲಿ 13 ಸ್ಥಳಗಳನ್ನು ಪಟ್ಟಿಮಾಡಿ ಶೋಧ ನಡೆಸಲಾಗುತ್ತಿತ್ತು. ಈ ಮಧ್ಯೆ ದೂರುದಾರ ಗುರುತು ಮಾಡದ ಬಂಗ್ಲಗುಡ್ಡದ ಮತ್ತೊಂದು ಸ್ಥಳದಲ್ಲಿ ಶವ ಹೂತಿಟ್ಟ ಬಗ್ಗೆ ಮಾಹಿತಿ ನೀಡಿದ್ದ. ಅಲ್ಲಿ ನಡೆದ ಶೋಧದ ವೇಳೆ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿತ್ತು. ಈ ನಿಟ್ಟಿನಲ್ಲಿ ಇಂದು 13ನೇ ಸ್ಥಳದಲ್ಲಿ ಶೋಧ ನಡೆಸುವ ಬದಲು ಬಂಗ್ಲಗುಡ್ಡದ ಸ್ಥಳದಲ್ಲಿ 11A ಎಂದು ಸ್ಥಳ ಪತ್ತೆಮಾಡಿ ಎಸ್ ಐಟಿ ತಂಡ ಶೋಧಕಾರ್ಯ ಮುಂದುವರೆಸಿದೆ.
ಇದೇ ವೇಳೆ ಎಸ್ ಐಟಿ ಶೋಧಕಾರ್ಯ ನಡೆಸುತ್ತಿದ್ದ ಸ್ಥಳದಲ್ಲಿ ಮತ್ತೋರ್ವ ಅನಾಮಿಕ ವ್ಯಕ್ತಿ ಬಂಗ್ಲಗುಡ್ಡಕ್ಕೆ ಆಗಮಿಸಿದ್ದಾನೆ. ಶವಗಳನ್ನು ಹೂತುಹಾಕಲು ದೂರುದಾರನಿಗೆ ಸಹಾಯ ಮಾಡಿದ್ದ ಎನ್ನಲಾದ ವ್ಯಕ್ತಿಯೊಬ್ಬ ಆಗಮಿಸಿದ್ದು, ಆತನ ಸಮ್ಮುಖದಲ್ಲಿ ಮಣ್ಣು ಅಗೆದು ಶೋಧಕಾರ್ಯ ನಡೆಸಲಾಗುತ್ತಿದೆ.