ಚೆನ್ನೈ: ಧರ್ಮಸ್ಥಳ ಪ್ರಕರಣದ ಹಿಂದೆ ಮಾಜಿ ಜಿಲ್ಲಾಧಿಕಾರಿ, ಸಂಸದ ಸಸಿಕಾಂತ್ ಸೇಂಥಿಲ್ ಕೈವಾಡವಿದೆ ಎಂಬ ಶಾಸಕ ಜನಾರ್ಧನ ರೆಡ್ಡಿ ಆರೋಪಕ್ಕೆ ಸಸಿಕಾಂತ್ ಸೆಂಥಿಲ್ ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದರು ಸಸಿಕಾಂತ್ ಸೆಂಥಿಲ್, ಧರ್ಮಸ್ಥಳ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಜನಾರ್ಧನ ರೆಡ್ಡಿ ಆರೋಪ ಬರೀ ಊಹಾಪೋಹ. ಕಟ್ಟುಕಥೆ ಎಂದು ತಿಳಿಸಿದ್ದಾರೆ.
ಜನಾರ್ಧನ ರೆಡ್ಡಿ ಹೇಳುತ್ತಿರುವುದನ್ನು ನೋಡಿ ನನಗೆ ನಗು ಬರುತ್ತಿದೆ. ಅನಗತ್ಯವಾಗಿ ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ. ತಾವೇ ಊಹಿಸಿಕೊಂಡು ಹೆಣೆದಿರುವ ಕಥೆ ಇದು ಎಂದು ಕಿಡಿಕಾರಿದ್ದಾರೆ.
ಧರ್ಮಸ್ಥಳ ಪ್ರಕರಣದಲ್ಲಿ ತಮಿಳುನಾಡಿನ ಕಾಂಗ್ರೆಸ್ ಸಂಸದ ಹಾಗೂ ದಕ್ಷಿಣ ಕನ್ನಡ ಮಾಜಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಕೈವಾಡವಿದೆ. ಸಸಿಕಾಂತ್ ಸೆಂಥಿಲ್ ಮೂಲಕ ಷಡ್ಯಂತ್ರ ನಡೆಯುತ್ತಿದೆ. ಮುಸುಕುಧಾರಿಯೂ ಕೂಡ ತಮಿಳುನಾಡು ಮೂಲದವನು. ಮುಸುಕುಧಾರಿ ಇಷ್ಟುವರ್ಷ ತಮಿಳುನಾಡಿನಲ್ಲಿಯೇ ವಾಸವಾಗಿದ್ದ. ತಮಿಳುನಾಡಿನ ಆ ವ್ಯಕ್ತಿಗೂ, ಸಸಿಕಾಂತ್ ಸೆಂಥಿಲ್ ಗೂ ನಂಟಿದೆ. ಧರ್ಮಸ್ಥಳ ಕೇಸ್ ಸಂಬಂಧ ಎಸ್ ಐಟಿ ತನಿಖೆಯಿಂದ ಸತ್ಯ ಹೊರಬರಲ್ಲ. ಸಿಬಿಐ ಅಥವಾ ಎನ್ ಐಎಯಿಂದ ತನಿಖೆಯಾಗಬೇಕು. ಈ ನಿಟ್ಟಿನಲ್ಲಿ ತಾನು ನ್ಯಾಯಾಲಯದ ಮೊರೆ ಹೋಗುವುದಾಗಿ ಜನಾರ್ಧನ ರೆಡ್ಡಿ ತಿಳಿಸಿದ್ದರು.