ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐಟಿ ತಂಡ ಒಂದೆಡೆ ಅಸ್ಥಿಪಂಜರಗಳಿಗಾಗಿ ಶೋಧಕಾರ್ಯ ಚುರುಕುಗೊಳಿಸಿದೆ. ಮತ್ತೊಂದೆಡೆ ಕಲ್ಲೇರಿ ರಹಸ್ಯ ಪತ್ತೆಗಾಗಿ ಮಾಹಿತಿ ಸಂಗ್ರಹಿಸುತ್ತಿದೆ.
ಧರ್ಮಸ್ಥಳದ ವಿವಿಧೆಡೆ ನೂರಾರು ಶವಗಳನ್ನು ಹೂತಿಟ್ಟಿರುವುದಾಗಿ ದೂರುದಾರ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದು, ಆತ ತೋರಿಸಿರುವ 13 ಜಾಗಗಳಲ್ಲಿ ಅಸ್ಥಿಪಂಜರಗಳಿಗಾಗಿ ಎಸ್ ಐಟಿಯಿಂದ ಶೋಧಕಾರ್ಯಾಚರಣೆ ನಡೆಸಲಾಗುತ್ತಿದೆ. ಈಗಾಗಲೇ 8 ಸ್ಥಳಗಳಲ್ಲಿ ಮಣ್ಣು ಅಗೆದು ಶೋಧ ನಡೆಸಲಾಗಿದ್ದು, 6ನೇ ಪಾಯಿಂಟ್ ನಲ್ಲಿ ಅಸ್ಥಿಪಂಜರ ಪತ್ತೆಯಾಗಿದೆ. ಉಳಿದೆಡೆ ಶೋಧಕಾರ್ಯಾಚರಣೆ ಮುಂದುವರೆದಿದೆ.
ಈ ನಡುವೆ ದೂರುದಾರನ ಮಾಹಿತಿ ಮೇರೆಗೆ ಕಲ್ಲೇರಿ ರಹಸ್ಯ ಪತ್ತೆ ಮಾಡಲು ಎಸ್ ಐಟಿ ಟೀಂ ಮುಂದಾಗಿದೆ. 13 ಸ್ಥಳಗಳಲ್ಲಿ ಶೋಧಕಾರ್ಯ ಮುಗಿದ ಬಳಿಕ ಕಲ್ಲೇರಿಯಲ್ಲಿ ಶೋಧಕಾರ್ಯ ನಡೆಸಲು ಮುಂದಾಗಿದೆ.
2010ರಲ್ಲಿ ಶಾಲಾ ಬಾಲಕಿ ನಾಪತ್ತೆಯಾಗಿದ್ದಳು. ದೂರುದಾರ ಎಸ್ ಐಟಿ ಮುಂದೆ ನೀಡಿರುವ ಹೇಳಿಕೆ ಪ್ರಕಾರ ಶಾಲಾ ಬಾಲಕಿಯೊಬ್ಬಳ ಮೃತದೇಹವನ್ನು ಕಲ್ಲೇರಿಯಲ್ಲಿ ಹೂತುಹಾಕಿದ್ದೆ. ಕಲ್ಲೇರಿ ಪೆಟ್ರೋಲ್ ಬಂಕ್ ಜಾಗದಿಂದ 500 ಮೀಟರ್ ದೂರದಲ್ಲಿ ಬಾಲಕಿಯ ಶವವನ್ನು ಹೂತುಹಾಕಿದ್ದಾಗಿ ತಿಳಿಸಿದ್ದಾನೆ. ಅಂದು ಶಾಲಾ ಬಾಲಕಿಯ ಶವವನ್ನು ಕೊಟ್ಟಿದ್ದರು. ಬಾಲಕಿ ಮೇಲೆ ಒಳವಸ್ತ್ರ, ಲಂಗ ಇರಲಿಲ್ಲ. ಶಾಲೆಯ ಸಮವಸ್ತ್ರದ ಅಂಗಿ ಧರಿಸಿದ್ದಳು. ಆಕೆಯ ಮೇಲೆ ಅತ್ಯಾಚಾರದಂತಹ ದೌರ್ಜನ್ಯ ನಡೆದಿರುವಂತೆ, ಕತ್ತು ಹಿಸುಕಿ ಕೊಲೆ ಮಾಡಿರುವಂತೆ ಕಂಡುಬಂದಿತ್ತು. ಬಾಲಕಿಯ ಶವವನ್ನು ಶಾಲಾ ಬ್ಯಾಗ್ ಸಮೇತ ಹೂತುಹಾಕಿದ್ದಾಗಿ ವಿವರಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಎಸ್ ಐಟಿ ಅಧಿಕಾರಿಗಳು 2010ರಲ್ಲಿ ಶಾಲಾ ಬಾಲಕಿ ನಾಪತ್ತೆಯಾಗಿದ್ದಳೇ? ಎಂಬ ಬಗ್ಗೆ ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಶಾಲೆಗಳಲ್ಲಿ ಬಾಲಕಿ ವಿಚಾರವಾಗಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.