ಬೆಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ಗೃಹ ಸಚಿವ ಪರಮೇಶ್ವರ್ ನೀಡಿರುವ ಸುದೀರ್ಘ ಉತ್ತರಕ್ಕೆ ವಿಪಕ್ಷ ನಾಯಕ ಆರ್.ಅಶೋಕ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಧರ್ಮಸ್ಥಳ ಪ್ರಕರಣದಲ್ಲಿ ಷಡ್ಯಂತ್ರ ನಡೆದಿದೆ ಎಂದು ಸ್ವತಃ ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ ಹೇಳಿದ್ದಾರೆ. ಯಾರು ಷಡ್ಯಂತ್ರ ಮಾಡಿದವರು ಎಂಬುದನ್ನೂ ಸಂದರ್ಭ ಬಂದಾಗ ಹೇಳುತ್ತೇನೆ ಎಂದಿದ್ದಾರೆ. ಷಡ್ಯಂತ್ರ ಮಾಡಿದವರು ಯಾರು? ಮೊದಲು ಬಹಿರಂಗಪಡಿಸಿ ಎಂದು ಪಟ್ಟು ಹಿಡಿದರು.
ಆರ್.ಅಶೋಕ್ ಹೇಳಿಕೆಗೆ ಬಿಜೆಪಿಯ ಇತರ ಸದಸ್ಯರೂ ಧ್ವನಿಗೂಡಿಸಿದರು. ಈ ವೇಳೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಧರ್ಮಸ್ಥಳ ಕ್ಷೇತ್ರದ ಬಗ್ಗೆ ನಮಗೂ ಭಕ್ತಿ, ಗೌರವವಿದೆ. ನಾವ್ಯಾರೂ ರಾಯಜೀಯ ಮಾಡುತ್ತಿಲ್ಲ. ಆದರೆ ವಿಪಕ್ಷದವರು ಅನಗತ್ಯವಾಗಿ ಈ ವಿಚಾರ ರಾಜಕೀಯ ಮಾಡುತ್ತಿದ್ದಾರೆ. ಅವರ ಉದ್ದೇಶವೇ ಬೇರೆಯಾಗಿದೆ. ರಾಜಕೀಯದಲ್ಲಿ ಧರ್ಮವಿರಬೇಕು. ಆದರೆ ಧರ್ಮದಲ್ಲಿ ರಾಜಕೀಯ ಮಾಡಬಾರದು. ಬಿಜೆಪಿಯವರು ಧರ್ಮದಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಪ್ರಕರಣದ ಬಗ್ಗೆ ಈಗಾಗಲೇ ಎಸ್ ಐಟಿ ತನಿಖೆ ನಡೆಸುತ್ತಿದೆ. ಎಸ್ ಐಟಿ ತನಿಖೆಗೆ ಸಂಬಂಧಿಸಿದಂತೆ ಗೃಹ ಸಚಿವರು ಸಮರ್ಪಕವಾಗಿ ಉತ್ತರ ನೀಡಿದ್ದಾರೆ. ತನಿಖೆ ಬಳಿಕ ಎಲ್ಲವೂ ಬಹಿರಂಗವಾಗಲಿದೆ ಎಂದರು. ಈ ವೇಳೆ ಮಾತನಾಡಿದ ವಿಪಕ್ಷನಾಯಕ್ ಆರ್.ಅಶೋಕ್, ಷಡ್ಯಂತ್ರ ನಡೆಸಿದವರು ಯಾರೆಂಬುದನ್ನು ಈಗಲೇ ಹೇಳಿ ಎಂದು ಆಗ್ರಹಿಸಿದರು. ಇದಕ್ಕೆ ಉತ್ತರ ನೀಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ತನಿಖಾ ವರದಿಯಲ್ಲಿ ಎಲ್ಲವೂ ಹೊರಬರುತ್ತದೆ. ಷ್ಯಡ್ಯಂತ್ರ ನಡೆಸಿದ್ದು ಯಾರು? ಅದರ ಹಿಂದಿರುವವರು ಯಾರೆಂಬುದು ಫೋಟೋ, ವಿವರಗಳ ಸಮೇತ ವರದಿಯಲ್ಲಿ ಬರಲಿದೆ ಎಂದು ತಿಳಿಸಿದರು.