ಬೆಂಗಳೂರು: ಹಿರಿಯ ವಕೀಲರಾದ ಬಾಲನ್ ಮತ್ತು ಡಾ. ಸಿ.ಎಸ್. ದ್ವಾರಕನಾಥ್ ಅವರ ನೇತೃತ್ವದ ವಕೀಲರ ನಿಯೋಗದವರು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಧರ್ಮಸ್ಥಳ ಪ್ರಕರಣದಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದ್ದಾರೆ.
ಮುಖ್ಯಮಂತ್ರಿಗಳ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾದ ವಕೀಲರ ನಿಯೋಗ ಅಗತ್ಯ ಕ್ರಮಕ್ಕೆ ಒತ್ತಾಯಿಸಿ ಮನವಿ ಸಲ್ಲಿಸಿದೆ.
ಸಿಎಂ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಸಿ.ಎಸ್. ದ್ವಾರಕನಾಥ್ ಅವರು, ಧರ್ಮಸ್ಥಳ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾದ ಸಾಮೂಹಿಕ ಅತ್ಯಾಚಾರ, ಕೊಲೆ ಮತ್ತು ಶವಗಳನ್ನು ಹೂತು ಹಾಕಿರುವ ಘಟನೆಗೆ ಸಂಬಂಧಿಸಿದಂತೆ ಚರ್ಚೆ ನಡೆಸಲಾಗಿದೆ. ಈಗಾಗಲೇ ಅಲ್ಲಿ ತನಿಖೆ ನಡೆಯುತ್ತಿದ್ದು, ಒಬ್ಬರು ದೂರು ಕೂಡ ನೀಡಿದ್ದಾರೆ. ಆ ವ್ಯಕ್ತಿಗೆ ಸೂಕ್ತ ರಕ್ಷಣೆ ನೀಡಬೇಕಿದೆ. ಆ ವ್ಯಕ್ತಿ ಹೇಳುವ ಜಾಗದಲ್ಲಿ ಪರಿಶೀಲನೆ ನಡೆಸಬೇಕಿದೆ. ಹೀಗಾಗಿ ಪ್ರಕರಣವನ್ನು ಎಸ್ಐಟಿ ತನಿಖೆಗೆ ವಹಿಸುವಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.