ದಕ್ಷಿಣ ಕನ್ನಡ : ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರ ಗುರುತಿಸಿದ ಸ್ಥಳದಲ್ಲಿ ಅಗೆಯುವ ಪ್ರಕ್ರಿಯೆ ನಿನ್ನೆಯಿಂದ ಆರಂಭವಾಗಿದೆ. ಇದೀಗ ಏಕಕಾಲದಲ್ಲಿ ಮೂರು ಜಾಗ ಅಗೆಯಲು ಎಸ್ ಐ ಟಿ ಅಧಿಕಾರಿಗಳು ನಿರ್ಧರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಸಮಾಧಿ ಅಗೆಯುವ ಪ್ರಕ್ರಿಯೆ ತಡವಾಗುತ್ತಿರುವ ಹಿನ್ನೆಲೆ ಏಕಕಾಲದಲ್ಲಿ ಮೂರು ಸಮಾಧಿ ಅಗೆಯಲು ಎಸ್ ಐ ಟಿ ಅಧಿಕಾರಿಗಳು ನಿರ್ಧರಿಸಿದ್ದಾರೆ.
ಸೋಮವಾರ ದೂರುದಾರ ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೃತದೇಹಗಳನ್ನು ಹೂತು ಹಾಕಿದ್ದೇನೆ ಎಂದು 13 ಸ್ಥಳಗಳನ್ನು ಗುರುತಿಸಿದ್ದನು. ಆ ಸ್ಥಳಗಳಿಗೆ ಆಗಮಿಸಿರುವ ಎಸ್ ಐ ಟಿ ಗುರುತು ಮಾಡಿರುವ ಸ್ಥಳಗಳನ್ನು ಅಗೆಯುವ ಪ್ರಕ್ರಿಯೆ ಆರಂಭಿಸಿದೆ.
ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಹಿಂದೆ ನಡೆದಿದೆ ಎನ್ನಲಾದ ಶವಗಳನ್ನು ಹೂತು ಹಾಕಿರುವುದಾಗಿ ಹೇಳಲಾದ ಸ್ಥಳಗಳಲ್ಲಿ ಮಹಜರು ನಡೆಸಲಾಗಿತ್ತು. ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಿರುವುದಾಗಿ ದೂರುದಾರ ಹೇಳಿದ್ದ ಸ್ಥಳಗಳಲ್ಲಿ ಮಹಜರು ನಡೆಸಲಾಗಿದೆ. ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಸಮೀಪ 13 ಜಾಗಗಳನ್ನು ಎಸ್ಐಟಿ ಅಧಿಕಾರಿಗಳಿಗೆ ದೂರುದಾರ ತೋರಿಸಿದ್ದಾರೆ. ವಿಧಿ ವಿಜ್ಞಾನ ತಜ್ಞರು, ಭದ್ರತಾ ಸಿಬ್ಬಂದಿ ಸಾಕ್ಷಿ ದೂರುದಾರನೊಂದಿಗೆ ಧರ್ಮಸ್ಥಳದ ಸ್ನಾನಘಟ್ಟ ಸಮೀಪದ ಅರಣ್ಯ ಪ್ರದೇಶದಲ್ಲಿ ನಿನ್ನೆಯಿಂದ ಪರಿಶೀಲನೆ ನಡೆಸಿದ್ದಾರೆ.