ಧರ್ಮಸ್ಥಳ: ಧರ್ಮಸ್ಥಳದ ವಿರುದ್ಧ ಅಪಪ್ರಚಾರ, ಪಿತೂರಿ ಖಂಡಿಸಿ ರಾಜ್ಯ ಬಿಜೆಪಿ ನಾಯಕರು ಧರ್ಮಸ್ಥಳ ಚಲೋ ನಡೆಸಿ ಬೃಹತ್ ಸಮಾವೇಶ ನಡೆಸಿದ್ದು, ಆದರೆ ಬಿಜೆಪಿ ನಾಯಕರಲ್ಲಿನ ಬಿಕ್ಕಟ್ಟು ಸಮಾವೇಶದ ವೇದಿಕೆಯಲ್ಲಿ ಬಹಿರಂಗವಾದ ಘಟನೆ ನಡೆದಿದೆ.
ಧರ್ಮಸ್ಥಳದಲ್ಲಿ ನಡೆದ ಬಿಜೆಪಿ ಬೃಹತ್ ಸಮಾವೇಶದಲ್ಲಿ, ಭಾಷಣ ಆರಂಭಿಸುತ್ತಿದ್ದಂತೆಯೆ ಒಂದೆಡೆ ವಿಪಕ್ಷ ನಾಯಕ ಆರ್.ಅಶೋಕ್ ಎಡವಟ್ಟು ಮಾಡಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿಯವರೇ ಎಂದು ಹೇಳಿದ್ದಾರೆ. ತಕ್ಷಣ ಎಚ್ಚೆತ್ತು ಕ್ಷಮಿಸಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರೇ ಎಂದು ಹೇಳಿ ಭಾಷಣ ಮುಂದುವರೆಸಿದ ಪ್ರಸಂಗ ನಡೆಯಿತು.
ಅಷ್ಟೇ ಅಲ್ಲ ಬಿಜೆಪಿ ಬೃಹ ಸಮಾವೇಶದಲ್ಲಿ ಕರಾವಳಿ ಭಾಗದ ಘಟಾನುಘಟಿ ನಾಯಕರಿಗೇ ಭಾಷಣಕ್ಕೆ ಅವಕಾಶ ನೀಡದಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ. ಕರಾವಳಿ ಭಾಗದ ಬಿಜೆಪಿ ಮುಖಂಡರಿಗೆ, ಹಿರಿಯ ನಾಯಕರಿಗೆ ವೇದಿಕೆಯಲ್ಲಿ ಭಾಷಣಕ್ಕೆ ಅವಕಾಶವಿರಲಿಲ್ಲ.
ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಶಾಸಕ ಸುನೀಲ್ ಕುಮಾರ್, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಸಿಎಂ ಡಿ.ವಿ.ಸದಾನಂದಗೌಡ, ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಹಲವರಿಗೆ ಭಾಷಣಕ್ಕೆ ಅವಕಾಶ ಸಿಗದೇ ವೇದಿಕೆಯಿಂದಲೇ ಹೊರಬಂದ ಘಟನೆಯೂ ನಡೆದಿದೆ. ಒಟ್ಟಾರೆ ರಾಜ್ಯ ಬಿಜೆಪಿ ಪಾಳಯದಲ್ಲಿನ ಬಿಕ್ಕಟ್ಟು ಮತ್ತೊಮ್ಮೆ ಬಹಿರಂಗವಾದಂತಾಗಿದೆ.