ಮಂಗಳೂರು: ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಎಸ್ ಐಟಿ ರಚನೆಯಾಗಿದ್ದು, ಸಮರ್ಪಕ ತನಿಖೆ ನಡೆಸಿ ಸತ್ಯ ಸಂಗತಿ ಬಯಲಿಗೆಳೆಯಲಿದೆ ಎಂದು ಸ್ಪೀಕರ್ ಯು.ಟಿ.ಖಾದರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯು.ಟಿ.ಖಾದರ್, ವ್ಯಕ್ತಿಯೊಬ್ಬರ ಹೇಳಿಕೆಯಂತೆ ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಕೊಲೆ ಪ್ರಕರಣಗಳ ತನಿಖೆಗೆ ಸರ್ಕಾರ ಎಸ್ ಐಟಿ ರಚನೆ ಮಾಡಿದೆ. ಸಮರ್ಪಕ ತನಿಖೆ ನಡೆದು ಸತ್ಯ ಸಂಗತಿ ಹೊರಬಂದು ಕಾನೂನು ಕ್ರಮ ಕೈಗೊಳ್ಳಲಿ. ಆದರೆ ತನಿಖೆಗೆ ಮುನ್ನವೇ ಪೂರ್ವಾಗ್ರಹದ ತೀರ್ಮಾನಕ್ಕೆ ಬರುವುದು ಸರಿಯಲ್ಲ. ಪವಿತ್ರ ಕ್ಷೇತ್ರಕ್ಕೆ ಧಕ್ಕೆ ತರುವ ಕೆಲಸ ಆಗಬಾರದು. ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.
ಇನ್ನು ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ಮಂಗಳೂರು ಎಂದು ಮರುನಾಮಕರಣ ಮಾಡಬೇಕು ಎಂಬ ವಿಚಾರ ಚರ್ಚೆಯಲ್ಲಿದೆ. ಹೆಸರಿನ ಹಿಂದೆ ಪರಂಪರೆ, ಇತಿಹಾಸ, ಸಂಸ್ಕೃತಿ ಎಲ್ಲವೂ ಅಡಕವಾಗಿರುತ್ತದೆ. ಹಿರಿಯರು, ಸಾಹಿತಿಗಳು, ತಜ್ಞರ ಜೊತೆ ಸಾಧಕ-ಬಾಧಕ ಚರ್ಚಿಸಿ ಒಮ್ಮತದ ಅಭಿಪ್ರಾಯ ಬರಬೇಕು. ಮಂಗಳೂರು ಅಭಿವೃದ್ಧಿ ಹೆಸರಿಗಿಂತ ನೆಲದಲಿ ಸೌಹಾರ್ದ ವಾತಾವರಣ ಬೇಕು. ಆ ನಿಟ್ಟಿನಲ್ಲಿ ನಾವೆಲ್ಲ ಪ್ರಯತ್ನಿಸಬೇಕು ಎಂದರು.
ವಿಧಾನಮಂಡಲ ಮುಂಗಾರು ಅಧಿವೇಶನ ಆಗಸ್ಟ್ 11ರಿಂದ 22ರವರೆಗೆ ಆರಂಭವಾಗಲಿದೆ ಎಂದರು.