ಬೆಂಗಳೂರು: ಧರ್ಮಸ್ಥಳದ ಬಗ್ಗೆ ಅಪಪ್ರಚರಾ ಮಾಡಲಾಗುತ್ತಿದೆ. ಕೆಟ್ಟ ಹೆಸರು ತರುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ. ಯೂಟ್ಯೂಬ್ ಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ ಇದರ ವಿರುದ್ಧ ಸರ್ಕಾರ ಏನು ಕ್ರಮ ಕೈಗೊಂಡಿದೆ ಎಂದು ಬಿಜೆಪಿ ಶಾಸಕ ಸುನಿಲ್ ಕುಮಾರ್ ಪ್ರಶ್ನಿಸಿದ್ದಾರೆ.
ವಿಧಾನಸಭೆಯಲ್ಲಿ ಮಾತನಾಡಿದ ಸುನಿಲ್ ಕುಮಾರ್, ಧರ್ಮಸ್ಥಳದ ವಿಚಾರವಾಗಿ ಷಡ್ಯಂತ್ರ ನಡೆದಿದೆ ಎಂದು ಹೇಳಲಾಗುತ್ತಿದೆ. ಆ ಷಡ್ಯಂತ್ರ ನಡೆಸುತ್ತಿರುವವರು ಯಾರೆಂದು ಸರ್ಕಾರ ಬಹಿರಂಗಪಡಿಸಬೇಕಿತ್ತು. ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಈವರೆಗೂ ಯಾಕೆ ಕ್ರಮ ಕೈಗೊಳ್ಳಲಾಗಿಲ್ಲ? ಈ ಬಗ್ಗೆ ಗೃಹ ಸಚಿವರು ಉತ್ತರ ಕೊಡಬೇಕು ಎಂದರು.
ಒಬ್ಬ ಮುಸುಕುಧಾರಿ ಅಲ, ಇದರ ಹಿಂದೆ ಹತ್ತಾರು ಮುಸುಕುಧಾರಿಗಳಿದ್ದಾರೆ. ಅವರ ವಿರುದ್ಧವೂ ಕ್ರಮವಾಗಬೇಕು. ಧರ್ಮಸ್ಥಳದ ಹೆಸರಿಗೆ ಕೆಸರು ಎರಚಲು ದೊಡ್ದ ಹುನ್ನಾರ ನಡೆದಿದೆ. ಸರ್ಕಾರದ ಉದ್ದೇಶವೂ ಅದೇ ಆಗಿದೆ ಎಂದರು. ಸುನೀಲ್ ಕುಮಾರ್ ಈ ಹೇಳಿಕೆಗೆ ಆಡಳಿತ ಪಕ್ಷ ಕಾಂಗ್ರೆಸ್ ಸದಸ್ಯರು ಕೆರಳಿ ಕೆಂಡವಾಗಿದ್ದು, ನಿಮ್ಮ ಹೇಳಿಕೆಯನ್ನು ವಾಪಸ್ ಪಡೆಯಿರಿ ಎಂದು ಪಟ್ಟು ಹಿಡಿದರು. ರಾಜಕೀಯ ಉದ್ದೇಶದಿಂದ ಇಂತಹ ಆರೋಪ ಸರಿಯಲ್ಲ ಎಂದು ಗೃಹ ಸಚಿವರು ಗುಡುಗಿದರು. ಈ ವೇಳೆ ವಿಪಕ್ಷ ಹಾಗೂ ಆಡಳಿತ ಪಕ್ಷಗಳ ನಡುವೆ ಗದ್ದಲ-ಕೋಲಾಹಲ ಆರಂಭವಾಗಿದ್ದು, ಸ್ಪೀಕರ್ ಯು.ಟಿಖಾದರ್ ಕಲಾಪವನ್ನು ಕೆಲ ಕಾಲ ಮುಂದೂಡಿದರು.