ಬೆಂಗಳೂರು: ಪೊಲೀಸರೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿದ್ದು, ಈ ಹಿನ್ನೆಲೆಯಲ್ಲಿ ಡಿಜಿ-ಐಜಿಪಿ ಸಲಿಂ ಪೊಲೀಸರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಆರಕ್ಷಕರೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವುದರಿಂದ ಇಲಾಖೆಗೆ ಕೆಟ್ಟ ಹೆಸರು ಬರುತ್ತಿದೆ. ಅಪರಾಧಕೃತ್ಯಗಳಲ್ಲಿ ಶಾಮೀಲಾಗುವ ಪೊಲೀಸರು ಅಥವಾ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಶುಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದಾರೆ. ಈ ಬಗ್ಗೆ ಜ್ಞಾಪನಾ ಪತ್ರವನ್ನು ಹೊರಡಿಸಿದ್ದಾರೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ದರೋಡೆ ಪ್ರಕರಣದಲ್ಲಿ ಕಾನ್ಸ್ ಟೇಬಲ್ ಓರ್ವ ಶಾಮೀಲಾಗಿರುವುದು ಪತ್ತೆಯಾಗಿತ್ತು.ಅಲ್ಲದೇ ಕಳ್ಳತನದ ಆರೋಪಿಯೊಬ್ಬನನ್ನು ಬಂಧಿಸಿದ್ದ ಹೆಡ್ ಕಾನ್ಸ್ ಟೇಬಲ್ ಹಣ ದೋಚಿದ್ದ ಪ್ರಕರಣ ಕೂಡ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಡಿಜಿ-ಐಜಿಪಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
- ಎಲ್ಲಾ ಅಧಿಕಾರಿಗಳು ಅಧೀನದ ಪೊಲೀಸ್ ಸಿಬ್ಬಂದಿಯವರ ಮೇಲೆ ನಿಗಾ ವಹಿಸಬೇಕು.
- ನೈತಿಕ ಮಾನದಂಡಗಳು, ಕಾನೂನುಬದ್ಧ ಕರ್ತವ್ಯಗಳು, ಮತ್ತು ಭ್ರಷ್ಟಾಚಾರ , ಅಪರಾಧಗಳ ಗಂಭೀರ ಪರಿಣಾಮಗಳ ಕುರಿತು ಜಾಗೃತಿ ಮೂಡಿಸಬೇಕು.
ಸಿಬ್ಬಂದಿಗಳಿಗೆ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. - ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯ ದುರ್ವರ್ತನೆ, ಅಕ್ರಮ ಚಟುವಟಿಕೆಗಳು ಹಾಗೂ ಅಪರಾಧಿಕ ಕೃತ್ಯಗಳಲ್ಲಿ ತೊಡಗಿರುವ ಮಾಹಿತಿಗಳನ್ನು ತಕ್ಷಣವೇ ಪೊಲೀಸ್ ಪ್ರಧಾನ ಕಛೇರಿಗೆ ವರದಿ ಮಾಡಬೇಕು.
- ಇಲಾಖೆಯ ಘನತೆಯನ್ನು ಕಾಪಾಡುವ ಹೊಣೆಗಾರಿಕೆ ಮತ್ತು ಸಮಗ್ರತೆಯ ಸಂಸ್ಕೃತಿಯು ಅಧಿಕಾರಿ ಮತ್ತು ಸಿಬ್ಬಂದಿಗಳ ಸಮಾನ ಹೊಣೆಗಾರಿಕೆಯಾಗಿರುತ್ತದೆ.
- ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರುಗಳ ಮನೋಬಲ ಕಗ್ಗುವಿಕೆಯನ್ನು ಮತ್ತು ಇತರ ನೈತಿಕ ಲೋಪದೋಷಗಳಿಗೆ ಕಾರಣವಾಗುವ ಅಂಶಗಳಿಗೆ ಸೂಕ್ತವಾಗಿ ಸ್ಪಂದಿಸಬೇಕು.
- ಪ್ರಸ್ತುತ ಜಾರಿಯಲ್ಲಿರುವ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು.
- ನೀತಿ ಸಂಹಿತೆಯು ಅಡ್ಡದಾರಿಗಳಿಗೆ ಆಸ್ಪದವಾಗದಂತೆ ಕ್ರಮವಹಿಸಬೇಕು. ಇಲಾಖೆಯಲ್ಲಿ ದುರ್ನಡತೆಯನ್ನು ತಡೆಯುವ ಮೇಲ್ಕಂಡ ಎಲ್ಲಾ ಕ್ರಮಗಳನ್ನು ಅನುಷ್ಠಾನಗೊಳಿಸಲು ಸೂಚನೆ.
- ಅನುಷ್ಠಾನಗೊಳಿಸುವಲ್ಲಿ ವಿಫಲರಾಗುವ ಘಟಕಾಧಿಕಾರಿಗಳ ವಿರುದ್ಧ ಘೋರ ನಿರ್ಲಕ್ಷತೆ ಎಂದು ಪರಿಗಣನೆ ಮಾಡಲಾಗುತ್ತೆ.
- ನಿರ್ಲಕ್ಷ್ಯತೆ ತೋರಿದರೆ ಇಲಾಖಾ ಶಿಸ್ತಿನ ಕ್ರಮಕ್ಕೆ ಗುರಿಪಡಿಸಲಾಗುವುದು. ಪೊಲೀಸ್ ಇಲಾಖೆಯ ಘನತೆ, ಗೌರವ ಮತ್ತು ಸಮಗ್ರತೆಗಳಲ್ಲಿನ ರಾಜಿ ಸಮಂಜಸವಲ್ಲ ಮತ್ತು ಸಹಿಸಲು ಸಾಧ್ಯವಿಲ್ಲ.
- ಪೊಲೀಸ್ ಇಲಾಖೆಯ ಹಿರಿಮೆ ಮತ್ತು ಗೌರವಾದರಗಳನ್ನು ಹೆಚ್ಚಿಸುವ ಶಿಸ್ತುಬದ್ಧ, ಜವಾಬ್ದಾರಿಗಳು ಘಟಕಾಧಿಕಾರಿಗಳದ್ದಾಗಿರುತ್ತದೆ
- ಇಲಾಖೆಯ ಗೌರವವನ್ನು ಕಾಪಾಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ ಎಂಬುದನ್ನು ನಾವು ಮರೆಯಕೂಡದು ಎಂದು ಎಚ್ಚರಿಕೆ ನೀಡಿದ್ದಾರೆ.
