ದೆಹಲಿಯ ಜನಪ್ರಿಯ ಸರೋಜಿನಿ ನಗರ ಮಾರುಕಟ್ಟೆಯು ಬಟ್ಟೆಗಳಿಗಾಗಿ ಹೆಸರುವಾಸಿಯಾಗಿದೆ. ಇಲ್ಲಿ ಕೈಗೆಟಕುವ ದರದಲ್ಲಿ ಲಭ್ಯವಿರುವ ಫ್ಯಾಷನೇಬಲ್ ಉಡುಪುಗಳನ್ನು ಕೊಳ್ಳಲು ಮಹಿಳೆಯರು ಮುಗಿಬೀಳುತ್ತಾರೆ. ಆದರೆ, ಇತ್ತೀಚೆಗೆ ಇದೇ ಮಾರುಕಟ್ಟೆಯಲ್ಲಿ ನಡೆದ ಒಂದು ಘಟನೆ ಎಲ್ಲರ ಗಮನ ಸೆಳೆದಿದೆ. ಒಂದೇ ಡ್ರೆಸ್‌ಗಾಗಿ ಇಬ್ಬರು ಮಹಿಳೆಯರು ಪರಸ್ಪರ ತೀವ್ರವಾಗಿ ಹೊಡೆದಾಡಿಕೊಂಡಿದ್ದಾರೆ. ಈ ಗಲಾಟೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ವಿಡಿಯೋದಲ್ಲಿ ಇಬ್ಬರು ಮಹಿಳೆಯರು ಒಂದು ಉಡುಪಿಗಾಗಿ ವಾದಿಸುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ. ವಾದವು ತಾರಕಕ್ಕೇರಿದಾಗ, ಒಬ್ಬ ಮಹಿಳೆ ಇನ್ನೊಬ್ಬ ಮಹಿಳೆಗೆ ಕಪಾಳಕ್ಕೆ ಹೊಡೆಯುತ್ತಾಳೆ. ಇದರಿಂದ ಕೆರಳಿದ ಮತ್ತೊಬ್ಬ ಮಹಿಳೆ ತಕ್ಷಣವೇ ತಿರುಗೇಟು ನೀಡುತ್ತಾ ಆಕೆಯನ್ನು ಕೆಡವುತ್ತಾಳೆ. ಆರಂಭದಲ್ಲಿ ಮೂರನೇ ಮಹಿಳೆಯೊಬ್ಬರು ಮಧ್ಯಪ್ರವೇಶಿಸಿ ಸಮಾಧಾನಪಡಿಸಲು ಯತ್ನಿಸಿದರೂ, ಪರಿಸ್ಥಿತಿ ನಿಯಂತ್ರಣಕ್ಕೆ ಬಾರದೆ ಆಕೆಯೂ ಗಲಾಟೆಯಲ್ಲಿ ಭಾಗಿಯಾಗುತ್ತಾಳೆ.
ಬಟ್ಟೆ ಅಂಗಡಿಯ ಹೊರಗೆ ಈ ಕಾಳಗ ತೀವ್ರ ಸ್ವರೂಪ ಪಡೆದುಕೊಳ್ಳುತ್ತದೆ. ಸುತ್ತಲೂ ನೆರೆದಿದ್ದ ಜನರು ಜಗಳವನ್ನು ನಿಲ್ಲಿಸಲು ಪ್ರಯತ್ನಿಸದೆಯೇ ಕೇವಲ ನೋಡುತ್ತಾ ನಿಂತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಮಹಿಳೆಯರು ಪರಸ್ಪರರ ಕೂದಲನ್ನು ಹಿಡಿದು ಎಳೆಯುತ್ತಾ, ದೈಹಿಕವಾಗಿ ಹಲ್ಲೆ ಮಾಡಿಕೊಳ್ಳುತ್ತಿರುವುದು ಕಂಡುಬರುತ್ತದೆ. ಈ ವೇಳೆ ಅಲ್ಲಿದ್ದ ಒಬ್ಬ ವ್ಯಕ್ತಿ ಮಹಿಳೆಯರಲ್ಲಿ ಒಬ್ಬರನ್ನು ತಳ್ಳಲು ಪ್ರಯತ್ನಿಸುತ್ತಾನೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ತಮ್ಮದೇ ಆದ ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಕೆಲವರು ಆಧುನಿಕ ಉಡುಪುಗಳನ್ನು ಧರಿಸಿದ್ದರೂ ಮಹಿಳೆಯರ ಈ ವರ್ತನೆ ಹಾಸ್ಯಾಸ್ಪದವೆಂದು ಟೀಕಿಸಿದ್ದಾರೆ. “ಚೆನ್ನಾಗಿ ಉಡುಪು ಧರಿಸುವುದರಿಂದ ಮನಸ್ಥಿತಿ ಬದಲಾಗುವುದಿಲ್ಲ” ಎಂದು ವ್ಯಂಗ್ಯವಾಡಿದ್ದಾರೆ. ಇನ್ನು ಕೆಲವರು ಮಹಿಳೆಯರು ಬಟ್ಟೆಗಳ ವಿಷಯದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು, ಅಂಗಡಿಯವನು ಒಂದೇ ವಿನ್ಯಾಸದ ಎರಡು ಡ್ರೆಸ್‌ಗಳನ್ನು ಇಡದಿದ್ದದ್ದೇ ಈ ಗಲಾಟೆಗೆ ಕಾರಣ ಎಂದು ಆತನನ್ನು ದೂಷಿಸಿದ್ದಾರೆ.
दिल्ली की सरोजनी नगर मार्किट में कपड़े की ख़रीद को लेकर, महिलाओं के बीच हों गई लड़ाई एक दूसरे के बाल खीचे
— Lavely Bakshi (@lavelybakshi) April 8, 2025
विडिओ सोशल मीडिया पर वायरल हुआ pic.twitter.com/dBadYlHS56