ನವದೆಹಲಿ: ಕರ್ನಾಟಕ, ಕೇರಳ, ತಮಿಳುನಾಡು ಮಾತ್ರವಲ್ಲ ದೇಶದ ಹಲವು ರಾಜ್ಯಗಳಲ್ಲಿ ವರುಣಾರ್ಭಟ ಜೋರಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಾರಿ ಮಳೆಯಾಗುತ್ತಿದ್ದು, ವಿಮಾನ ಹಾಗೂ ರೈಲು ಸಂಚಾರಗಳಲ್ಲಿ ವ್ಯತ್ಯಯವಾಗಿದೆ.
ದೆಹಲಿಯಲ್ಲಿ ಶನಿವಾರ ರಾತ್ರಿಯಿಂದ ಗುಡುಗು ಸಹಿತ ಭಾರಿ ಮಳೆಯಾಗುತ್ತಿದೆ. ಬಿರುಗಾಳಿ ಮಳೆಯಿಂದಾಗಿ ಹಲವೆಡೆ ವಿದ್ಯುತ್ ಕಂಬಗಳು, ಮರಗಳು ಧರೆಗುರುಳಿವೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಮನೆಗಳು ಜಲಾವೃತಗೊಂಡಿವೆ. ಜನಜೀವನ ಅಸ್ತವ್ಯಸ್ಥಗೊಂಡಿದೆ.
ರಾತ್ರಿ 11ಗಂಟೆಯಿಂದ ಮುಂಜಾನೆ 5:30ರವರೆಗೆ ನಿರಂತರವಾಗಿ ಬಿರುಗಾಳಿ ಮಳೆಯಾಗಿದೆ. 82ಕಿ.ಮೀ ವೇಗದಲ್ಲಿ ಗಾಳಿ ಬೀಸಿದರೆ 81.2 ಮಿ ಮೀ ಮಳೆಯಾಗಿದೆ. ಪ್ರತಿಕೂಲ ಹವಾಮಾನದಿಂದಾಗಿ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟದಲ್ಲಿ ವ್ಯತ್ಯಯವಾಗಿಇದೆ.
ವಿಮಾನ ನಿಲ್ದಾಣಕ್ಕೆ ಹೋಗುವ ರಸ್ತೆಗಳು ಜಲಾವೃತಗೊಂಡಿದ್ದು, ಪ್ರಯಾಣಿಕರು ಪರದಾಟ ನಡೆಸಿದ್ದಾರೆ. 17 ಅಂತರಾಷ್ಟ್ರೀಯ ವಿಮಾಗಳು ಸೇರಿದಂತೆ ಒಟ್ಟು 49 ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗಿವೆ.
ದೆಹಲಿಯ ಮಿಂತೋ ರಸ್ತೆ, ಮೋತಿ ಬಾಗ್, ಕಂಟೋನ್ಮೆಂಟ್, ದೀನ್ ದಯಾಳ್ ಉಪಾಧ್ಯಾ ಮಾರ್ಗ ಸೇರಿದಂತೆ ಹಲವು ರಸ್ತೆಗಳು ನದಿಯಂತಾಗಿದ್ದು, ವಾಹನ ಸವಾರರು ಸಂಕಷ್ಟಕ್ಕೀಡಾಗಿದ್ದಾರೆ.