ನವದೆಹಲಿ: 35 ವರ್ಷದ ಮಹಿಳೆಯನ್ನು ಮಾನವ ಕಳ್ಳಸಾಗಣೆ ಮಾಡಿ, ಬಲವಂತವಾಗಿ ವೇಶ್ಯಾವಾಟಿಕೆಗೆ ದೂಡಲಾಗಿದ್ದು, ಅವರನ್ನು ರಕ್ಷಿಸಲಾಗಿದೆ.
ರಾಷ್ಟ್ರ ರಾಜಧಾನಿಯ ಜಿಬಿ ರಸ್ತೆಯ ರೆಡ್ ಲೈಟ್ ಪ್ರದೇಶದಲ್ಲಿ 35 ವರ್ಷದ ಮಹಿಳೆಯನ್ನು ಮಾನವ ಕಳ್ಳಸಾಗಣೆ ಮಾಡಿ ವೇಶ್ಯಾವಾಟಿಕೆಗೆ ದೂಡಲಾಗಿದೆ. ವೇಶ್ಯಾವಾಟಿಕೆ ಗೃಹದ ವ್ಯವಸ್ಥಾಪಕರನ್ನು ಸ್ಥಳದಲ್ಲೇ ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸ್ ಅಪರಾಧ ವಿಭಾಗ ಭಾನುವಾರ ತಿಳಿಸಿದೆ.
ಪೊಲೀಸರ ಪ್ರಕಾರ, ಪಶ್ಚಿಮ ಬಂಗಾಳ ಮೂಲದ ಮಹಿಳೆಯನ್ನು ಸುಮಾರು ಮೂರು ತಿಂಗಳ ಹಿಂದೆ ಕೆಲಸದ ಭರವಸೆ ನೀಡಿ ದೆಹಲಿಗೆ ಕರೆಸಲಾಗಿದೆ. ಆದರೆ ಕೆಲಸ ಕೊಡಿಸದೇ ಅಕ್ರಮ ವ್ಯಾಪಾರಕ್ಕೆ ಮಾರಾಟ ಮಾಡಲಾಯಿತು. ದೆಹಲಿಗೆ ಬಂದ ನಂತರ ಅವರು ತಮ್ಮ ಕುಟುಂಬದೊಂದಿಗೆ ಸಂಪರ್ಕ ಕಳೆದುಕೊಂಡರು, ಆದರೆ ಸುಮಾರು 10 ದಿನಗಳ ಹಿಂದೆ, ಅವರು ತಮ್ಮ ಸಹೋದರನಿಗೆ ಕರೆ ಮಾಡಿ ತಮ್ಮ ಪರಿಸ್ಥಿತಿಯ ಬಗ್ಗೆ ತಿಳಿಸುವಲ್ಲಿ ಯಶಸ್ವಿಯಾದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಂತರ ಆಕೆಯ ಸಹೋದರ ಸರ್ಕಾರೇತರ ಸಂಸ್ಥೆಯ(ಎನ್‌ಜಿಒ) ಸಹಾಯದಿಂದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವನ್ನು(ಎನ್‌ಹೆಚ್‌ಆರ್‌ಸಿ) ಸಂಪರ್ಕಿಸಿದರು. ಸುಳಿವಿನ ಆಧಾರದ ಮೇಲೆ, ಪೊಲೀಸ್ ತಂಡವು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿ ಏಪ್ರಿಲ್ 5 ರಂದು ದಾಳಿ ನಡೆಸಿತು. ಜಿಬಿ ರಸ್ತೆಯಲ್ಲಿರುವ ವೇಶ್ಯಾಗೃಹದಿಂದ ಆಕೆಯನ್ನು ರಕ್ಷಿಸಲಾಯಿತು ಮತ್ತು ಅದರ ವ್ಯವಸ್ಥಾಪಕರನ್ನು ಸ್ಥಳದಲ್ಲೇ ಬಂಧಿಸಲಾಯಿತು ಎಂದು ಅಧಿಕಾರಿ ಹೇಳಿದ್ದಾರೆ.
5 ನೇ ತರಗತಿಯವರೆಗೆ ಓದಿದ್ದ ಮತ್ತು ಬಡ ಕುಟುಂಬದಿಂದ ಬಂದ ಮಹಿಳೆ ಒಂದು ವರ್ಷದ ಹಿಂದೆ ವಿಚ್ಛೇದನ ಪಡೆದಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ದೆಹಲಿಯಲ್ಲಿ ಉದ್ಯೋಗದ ಭರವಸೆ ನೀಡಿ ಮಹಿಳೆಯೊಬ್ಬರು ಕಳ್ಳಸಾಗಣೆ ಮಾಡುವ ಮೊದಲು ಅವರು ಮನೆಕೆಲಸಗಾರರಾಗಿ ಕೆಲಸ ಮಾಡುತ್ತಿದ್ದರು. ಆಕೆಯ ಹೇಳಿಕೆಯ ಆಧಾರದ ಮೇಲೆ ಕಾನೂನು ಕ್ರಮ ಕೈಗೊಂಡಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.