ಲಂಡನ್: ಆಸ್ಟ್ರೇಲಿಯಾದ ಸ್ಟಾರ್ ಕ್ರಿಕೆಟಿಗ ಡೇವಿಡ್ ವಾರ್ನರ್, ಟಿ20 ಕ್ರಿಕೆಟ್ ಜಗತ್ತಿನಲ್ಲಿ ಹೊಸ ಮೈಲಿಗಲ್ಲು ತಲುಪಿದ್ದಾರೆ. ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ʼದಿ ಹಂಡ್ರೆಡ್ ಲೀಗ್ʼ ನಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ವಾರ್ನರ್, ಭಾರತದ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕುವ ಮೂಲಕ ಟಿ20 ರನ್ ಸರದಾರರ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೇರಿದ್ದಾರೆ.
ಇತ್ತೀಚೆಗೆ ನಡೆದ ಪಂದ್ಯವೊಂದರಲ್ಲಿ ವಾರ್ನರ್ 71 ರನ್ ಗಳಿಸುವ ಮೂಲಕ ತಮ್ಮ ಒಟ್ಟು ಟಿ20 ರನ್ಗಳ ಸಂಖ್ಯೆಯನ್ನು 13,545ಕ್ಕೆ ಹೆಚ್ಚಿಸಿಕೊಂಡಿದ್ದಾರೆ. ಈ ಮೂಲಕ ಅವರು ಆಸ್ಟ್ರೇಲಿಯಾ ಪರ ಟಿ20 ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇದಕ್ಕೂ ಮುನ್ನ ಐದನೇ ಸ್ಥಾನದಲ್ಲಿದ್ದ ವಿರಾಟ್ ಕೊಹ್ಲಿ, 397 ಪಂದ್ಯಗಳಿಂದ 13,543 ರನ್ ಗಳಿಸಿದ್ದರು. ಈಗ ವಾರ್ನರ್ ಕೇವಲ ಎರಡು ರನ್ಗಳ ಅಂತರದಿಂದ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ.
ಸದ್ಯ ವಾರ್ನರ್ ಮುಂದಿನ ಗುರಿ ಪಾಕಿಸ್ತಾನದ ಶೊಯೆಬ್ ಮಲಿಕ್. ಮಲಿಕ್ 13,571 ರನ್ ಗಳಿಸಿದ್ದು, ವಾರ್ನರ್ ಇನ್ನು 27 ರನ್ ಗಳಿಸಿದರೆ ಟಿ20 ರನ್ ಸರದಾರರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಜಿಗಿಯಲಿದ್ದಾರೆ.
ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿಶ್ವ ದಾಖಲೆ ವೆಸ್ಟ್ ಇಂಡೀಸ್ನ ದೈತ್ಯ ಕ್ರಿಸ್ ಗೇಲ್ ಹೆಸರಿನಲ್ಲಿದೆ. ಗೇಲ್ 455 ಇನ್ನಿಂಗ್ಸ್ಗಳಿಂದ ಬರೋಬ್ಬರಿ 14,562 ರನ್ ಸಿಡಿಸಿ ಅಗ್ರಸ್ಥಾನದಲ್ಲಿದ್ದಾರೆ.