ಬೆಳಗಾವಿ: ಪ್ರೀತಿಸಿದ್ದ ಯುವಕನೊಂದಿಗೆ ಪುತ್ರಿ ಹೋಗಿದ್ದರಿಂದ ಪೋಷಕರು ಬದುಕಿದ್ದಾಗಲೇ ಮಗಳ ಶ್ರಾದ್ಧ ಮಾಡಿದ್ದಾರೆ. ಪ್ರೇಮ ಪ್ರಕರಣಕ್ಕೆ ವಿರೋಧ ವ್ಯಕ್ತಪಡಿಸಿದ್ದ ಪೋಷಕರು ಮಗಳ ಶ್ರಾದ್ಧ ಮಾಡಿ ಸಂಬಂಧಿಕರು, ಗ್ರಾಮಸ್ಥರಿಗೆ ತಿಥಿ ಊಟ ಹಾಕಿಸಿದ್ದಾರೆ.
ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ನಾಗರಾಳ ಗ್ರಾಮದಲ್ಲಿ ಘಟನೆ ನಡೆದಿದೆ. 19 ವರ್ಷದ ಯುವತಿ ಅದೇ ಗ್ರಾಮದ ಯುವಕನನ್ನು ಪ್ರೀತಿಸುತ್ತಿದ್ದಳು. ಒಂದೇ ಗ್ರಾಮದವರಾಗಿದ್ದ ಇಬ್ಬರೂ ಮನೆಯವರ ಮುಂದೆ ಮದುವೆಯಾಗುವ ಬಗ್ಗೆ ವಿಷಯ ತಿಳಿಸಿದ್ದರು. ಆದರೆ ಪೋಷಕರು ಒಪ್ಪದ ಕಾರಣಕ್ಕೆ ಮನೆ ಬಿಟ್ಟು ಓಡಿ ಹೋಗಿದ್ದರು.
ಯುವತಿಯ ತಂದೆ ರಾಯಭಾಗ ಪೊಲೀಸ್ ಠಾಣೆಯಲ್ಲಿ ಪುತ್ರಿ ನಾಪತ್ತೆಯಾದ ಬಗ್ಗೆ ದೂರು ನೀಡಿದ್ದರು. ಪೊಲೀಸರು ಯುವ ಜೋಡಿಯನ್ನು ಕರೆದು ರಾಜೀ ಮಾಡಿಸಲು ಪ್ರಯತ್ನಿಸಿದ್ದಾರೆ. ಪ್ರೀತಿಸಿದ ಯುವಕನೊಂದಿಗೆ ಇರುವುದಾಗಿ ಯುವತಿ ತಿಳಿಸಿದ್ದಾಳೆ.
ದರಿಂದ ಸಿಟ್ಟಿಗೆದ್ದ ಯುವತಿಯ ಕುಟುಂಬದವರು ಆಕೆಯ ಶ್ರಾದ್ಧ ಮಾಡಿದ್ದಾರೆ. ಗ್ರಾಮದಲ್ಲಿ ಮಗಳ ಫೋಟೋ ಇರುವ ಶ್ರದ್ಧಾಂಜಲಿ ಫ್ಲೆಕ್ಸ್ ಹಾಕಿದ್ದಾರೆ. ಸಂಬಂಧಿಕರು, ಗ್ರಾಮಸ್ಥರಿಗೆ ತಿಥಿ ಊಟ ಹಾಕಿಸಿದ್ದಾರೆ.