ಶಿವಮೊಗ್ಗ: ನಗರದ ಪ್ರಸಿದ್ಧ ಕೋಟೆ ಶ್ರೀ ಮಾರಿಕಾಂಬ ಜಾತ್ರೆಯ ದಿನಾಂಕ ನಿಗದಿ ಮಾಡಲಾಗಿದೆ. 2026ರ ಫೆಬ್ರವರಿ 24 ರಿಂದ 28 ರವರೆಗೆ ಐದು ದಿನಗಳ ಕಾಲ ಕೋಟೆ ಮಾರಿಕಾಂಬ ದೇವಿ ಜಾತ್ರೆ ನಡೆಸಲು ಕೋಟೆ ಶ್ರೀ ಮಾರಿಕಾಂಬ ಸೇವಾ ಸಮಿತಿ ನಿರ್ಧಾರ ಕೈಗೊಂಡಿದೆ.
ಎರಡು ವರ್ಷಕ್ಕೊಮ್ಮೆ ನಡೆಯುವ ಜಾತ್ರೆಯ ದಿನಾಂಕವನ್ನು ಸಾಮಾನ್ಯವಾಗಿ ಡಿಸೆಂಬರ್ ನಲ್ಲಿ ಪ್ರಕಟಿಸಲಾಗುತ್ತಿತ್ತು. ಈ ವರ್ಷ ಎರಡೂವರೆ ತಿಂಗಳ ಮೊದಲೇ ಜಾತ್ರೆಯ ದಿನಾಂಕ ಪ್ರಕಟಿಸಲಾಗಿದೆ. ಮಾರಿಕಾಂಬ ಜಾತ್ರೆಯ ಹಿಂದೆ ಮುಂದೆ 10 ದಿನಗಳ ಕಾಲ ಮದುವೆ, ನಾಮಕರಣ, ನಿಶ್ಚಿತಾರ್ಥ ನಡೆಸುವುದಿಲ್ಲ. ಇದು ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ. ಮದುವೆಗಳಿಗೆ ಆರು ತಿಂಗಳ ಮೊದಲ ಛತ್ರಗಳನ್ನು ಬುಕಿಂಗ್ ಮಾಡುವುದರಿಂದ ಮಾರಿಕಾಂಬ ಜಾತ್ರೆ ಯಾವ ದಿನಾಂಕ ನಡೆಸಲಾಗುವುದು ಎಂದು ಭಕ್ತರು ಕೇಳಿಕೊಂಡು ದೇವಾಲಯಕ್ಕೆ ಬರುತ್ತಿದ್ದರು.
ಹೀಗಾಗಿ ವಿವಿಧ ಜಾತ್ರೆ, ಅಮಾವಾಸ್ಯೆ, ಹುಣ್ಣಿಮೆ, ಪರೀಕ್ಷೆ ಎಲ್ಲವನ್ನು ಗಮನಿಸಿ ಭಕ್ತರ ಅನುಕೂಲಕ್ಕಾಗಿ ಫೆಬ್ರವರಿ 24 ರಿಂದ 28 ರವರೆಗೆ ಐದು ದಿನಗಳ ಕಾಲ ಮಾರಿಕಾಂಬ ದೇವಿ ಜಾತ್ರೆ ನಡೆಸಲು ದಿನಾಂಕ ನಿಗದಿಪಡಿಸಲಾಗಿದೆ ಎಂದು ಕೋಟೆ ಶ್ರೀ ಮಾರಿಕಾಂಬ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ತಿಳಿಸಿದ್ದಾರೆ.