ನವದೆಹಲಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಟ ದರ್ಶನ್ ಹಾಗೂ ಗ್ಯಾಂಗ್ ಗೆ ಬಿಗ್ ಶಾಕ್ ನೀಡಿದೆ. ನಟ ದರ್ಶನ್, ಪವಿತ್ರಾಗೌಡ ಸೇರಿದಂತೆ ಏಳು ಆರೋಪಿಗಳ ಜಾಮೀನು ರದ್ದುಗೊಳಿಸಿ ಮಹತ್ವದ ತೀರ್ಪು ಪ್ರಕಟಿಸಿದೆ.
ಅಲ್ಲದೇ ಇದೊಂದು ‘ಲ್ಯಾಂಡ್ ಮಾರ್ಕ್ ತೀರ್ಪು’. ಈ ತೀರ್ಪಿನ ಪ್ರತಿಯನ್ನು ದೇಶದ ಎಲ್ಲಾ ಹೈಕೋರ್ಟ್ ಗಳಿಗೆ ಹಾಗೂ ಜೈಲುಗಳಿಗೆ ರಾವನಿಸುವಂತೆ ಸುಪ್ರೀಂ ಕೋರ್ಟ್ ನ ನ್ಯಾ. ಪರ್ದಿವಾಲಾ, ನ್ಯಾ.ಆರ್.ಮಹದೇವನ್ ಪೀಠ ಸೂಚಿಸಿದೆ.
ದರ್ಶನ್ ಹಾಗೂ ಗ್ಯಾಂಗ್ ನಿಂದ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ಹೈಕೋರ್ಟ್ ನೀಡಿರುವ ತೀರ್ಪಿನಲ್ಲಿ ದೋಷಗಳಿವೆ. ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ. ಆರೋಪಿ ಎಷ್ಟೇ ದೊಡ್ದವನಾಗಿದ್ದರೂ ಕಾನೂನಿನ ಮುಂದೆ ತಲೆಬಾಗಲೇಬೇಕು. ಸಾಕ್ಷಿಗಳ ವಿಚಾರಣೆಯನ್ನು ನಡೆಸದೇ ತೀರ್ಪು ಪ್ರಕಟಿಸಿರುವುದು ಸರಿಯಲ್ಲ. ಕೊಲೆ ಆರೋಪಿಗಳಿಗೆ ರಾಜಾತಿಥ್ಯ ನೀಡಿರುವ ಬಗ್ಗೆ ದೂರು ದಾಖಲಾಗಿದ್ದರೂ ಈ ಬಗ್ಗೆ ಸಮರ್ಪಕವಾಗಿ ವಿಚಾರಣೆ ನಡೆಸದೇ ಜಾಮೀನು ನೀಡಿರುವ ಹೈಕೋರ್ಟ್ ಕ್ರಮ ಸರಿಯಲ್ಲ. ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಬಗ್ಗೆ ಶೀಘ್ರವಾಗಿ ಸಾಕ್ಷ್ಯಗಳ ವಿಚಾರಣೆಯನ್ನು ನಡೆಸುವಂತೆ ಸುಪ್ರೀಂ ಕೋರ್ಟ್ ತಿಳಿಸಿದೆ.
ಈ ಪ್ರಕರಣದ ಆರೋಪಿಗಳಿಗೆ ಜೈಲಿನಲ್ಲಿ 5 ಸ್ಟಾರ್ ಟ್ರೀಟ್ ಮೆಂಟ್ ನೀಡಲಾಗಿದೆ. ಈ ಬಗ್ಗೆ ಜೈಲಾಧಿಕಾರಿಗಳ ವಿರುದ್ಧ ಕ್ರಮವಾಗಬೇಕಿತ್ತು. ಆರೋಪಿಗಳಿಗೆ ಜೈಲಿನಲ್ಲಿ ರಾಜಾತಿಥ್ಯ ನೀಡುವುದು, ಜೈಲಿನ ಲಾನ್ ನಲ್ಲಿ ಕುಳಿತು ಸಿಗರೇಟ್ ಸೇದುವುದು, ಮೊಬೈಲ್ ನಲ್ಲಿ ಮಾತನಾಡುವುದು ಇಂತಹ ನಡವಳಿಕೆ ಕಂಡುಬಂದಲ್ಲಿ ಇನ್ಮುಂದೆ ಜೈಲಾಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
ಆರೋಪಿಗಳ ಮೊಬೈಲ್ ನಲ್ಲಿ ಫೋಟೋ, ವಿಡಿಯೋ ಕಂಡುಬಂದರೆ ಗೃಹ ಇಲಾಖೆಯನ್ನು ಕರೆಸಲಾಗುವುದು ಎಂದು ಸುಪ್ರೀಮ್ ಕೋರ್ಟ್ ಖಡಕ್ ಎಚ್ಚರಿಕೆ ನೀಡಿದೆ. ಅಲ್ಲದೇ ಈ ತೀರ್ಪಿನ ಪ್ರತಿಯನ್ನು ಎಲ್ಲಾ ಹೈಕೋರ್ಟ್, ಜೈಲುಗಳಿಗೂ ರವಾನಿಸಲು ಸೂಚನೆ ನೀಡಿದೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ನಟ ದರ್ಶನ್ ಸೇರಿ ಏಳು ಆರೋಪಿಗಳ ಜಾಮೀನು ರದ್ದಾಗಿದ್ದು, ತಕ್ಷಣ ಆರೋಪಿಗಳನ್ನು ವಶಕ್ಕೆ ಪಡೆಯುವಂತೆ ಸುಪ್ರೀಮ್ ಕೋರ್ಟ್ ಸೂಚಿಸಿದೆ.