ಬೆಂಗಳೂರು: ವಿಧಾನಸಭೆ ಕಲಾಪದ ವೇಳೆ ಆರ್.ಎಸ್.ಎಸ್ ಗೀತೆ ಹಾಡುವ ಮೂಲಕ ಗಮನ ಸೆಳೆದಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್, ಹಲವು ಕಾಂಗ್ರೆಸ್ ನಾಯಕರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಂತೆ ಡಿ.ಕೆ.ಶಿವಕುಮಾರ್ ಕ್ಷಮೆ ಕೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಸದನದಲ್ಲಿ ನಾನು ಆರ್.ಎಸ್.ಎಸ್ ಗೀತೆ ಹಾಡಿದ್ದಕ್ಕೆ ಹಲವರ ಮನಸ್ಸಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ. ಕಾರ್ಯಕರ್ತರ ಬಳಿ ಕ್ಷಮೆ ಕೇಳುತ್ತೇನೆ. ಯಾರನ್ನೂ ನೋಯಿಸುವ ಉದ್ದೇಶವಿಲ್ಲ ಎಂದರು.
ನಾನು ಆರ್ ಎಸ್ ಎಸ್ ಗೀತೆ ಹೇಳಿದ್ದಕ್ಕೆ ಕೆಲವರು ಕಾಂಗ್ರೆಸ್ ಬಗ್ಗೆ ನನ್ನ ಪಕ್ಷ ನಿಷ್ಠೆಯನ್ನು ಅನುಮಾನಿಸಿದ್ದಾರೆ. ನಾನು ಹುಟ್ಟಿದ್ದೇ ಕಾಂಗ್ರೆಸ್ಸಿಗನಾಗಿ. ನಾನು ಸಾಯುವವರೆಗೂ ಕಾಂಗ್ರೆಸ್ಸಿಗನಾಗಿಯೇ ಇರುತ್ತೇನೆ. ನನ್ನ ಪಕ್ಷ ನಿಷ್ಠೆ ಬಗ್ಗೆ ಅನುಮಾನ ವ್ಯಕ್ತಪಡಿಸುವವರು ಮೂರ್ಖರು. ಪಕ್ಷದ ಬಗ್ಗೆ ನನಗಿರುವ ಬದ್ಧತೆ, ನಿಷ್ಠೆ ವಿಚಾರವಾಗಿ ಅವರಾರೂ ನನ್ನ ಹತ್ತಿರಕ್ಕೂ ಬರಲಾರರು ಎಂದು ತಿಳಿಸಿದ್ದಾರೆ.
ಕಲಾಪದ ವೇಳೆ ವಿಪಕ್ಷಗಳು ಸಿದ್ಧಾಂತದ ಬಗ್ಗೆ ಹೇಳುತ್ತಿದ್ದಾಗ ವಿಪಕ್ಷದ ಸಿದ್ಧಾಂತದ ಬಗ್ಗೆ ನಮಗೂ ಅರಿವಿದೆ ಎಂದು ಅವರ ಕಾಲೆಳೆದೆ ಅಷ್ಟೇ ಬೇರೆ ಇನ್ನೇನೂ ಇಲ್ಲ ಎಂದು ಸ್ಪಷ್ಟಪಡಿಸಿದರು.
ವಿಧಾನಸಭೆಯಲ್ಲಿ ಆಚಾರ-ವಿಚಾರ ಪಾಲನೆ ಮಾಡಿಕೊಂಡು ಬಂದಿದ್ದೇನೆ. ನಾನು ವಿದ್ಯಾರ್ಥಿಯಾಗಿದ್ದಾಗಿನಿಂದಲೂ ಹೋರಾಟ ನಡೆಸಿಯೇ ಬಂದವನು. ಸಂಘಟನೆಯಿಂದಲೇ ಗುರುತಿಸಿಕೊಂಡವನು. ನನಗೆ ಯಾರ ಪಾಠವೂ ಅಗತ್ಯವಿಲ್ಲ. ನನಗೂ ಗಾಂಧಿ ಕುಟುಂಬಕ್ಕೂ ಭಕ್ತ-ಭಗವಂತನ ಸಂಬಂಧ. ನಾನು ಎಂಎ ಪೊಲಿಟಿಕಲ್ ವಿದ್ಯಾರ್ಥಿ. ರಾಜಕೀಯಕ್ಕೆ ಬರುವ ಮೊದಲೇ ಎಲ್ಲಾ ಪಕ್ಷಗಳ ಬಗ್ಗೆ ಅಧ್ಯಯನ ನಡೆಸಿದವನು. ಎಲ್ಲಾ ಪಕ್ಷಗಳ ಬಗ್ಗೆಯೂ ತಿಳಿದುಕೊಂಡಿದ್ದೇನೆ ಎಂದು ಹೇಳಿದರು. ಬೇಕಾದರೆ ಕ್ಷಮೆ ಕೇಳೋಣ. ಬಿ.ಕೆ.ಹರಿಪ್ರಸಾದ್ ಗೂ ಕ್ಷಮೆ ಕೇಳೋಣ. ನಾನು ಕಾಂಗ್ರೆಸ್ ಪಕ್ಷದಲ್ಲಿದ್ದೇನೆ ನಿಜ. ಹಾಗಂತ ನನ್ನ ಧರ್ಮ ನಾನು ಬಿಡಲ್ಲ. ನನ್ನ ಧರ್ಮದ ಜೊತೆಗೆ ಬೇರೆ ಧರ್ಮವನ್ನೂ ನಾನು ಗೌರವಿಸುತ್ತೇನೆ ಎಂದರು.