ಬೆಂಗಳೂರು: ನಾವು ಅವರ ಪರವೂ ಇಲ್ಲ, ಇವರ ಪರವೂ ಇಲ್ಲ. ನಾವು ನ್ಯಾಯದ ಪರ. ಧರ್ಮದ ವಿಚಾರದಲ್ಲಿ ರಾಜಕಾರಣ ಮಾಡಬೇಡಿ ಎಂದಷ್ಟೇ ನಾವು ಹೇಳುತ್ತಿದ್ದೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಧರ್ಮಸ್ಥಳ ಪ್ರಕರಣದಲ್ಲಿ ಸಾಕ್ಷಿ ದೂರುದಾರನ ಬಂಧನವಾಗಿದೆ, ‘ಷಡ್ಯಂತ್ರ’ವಾಗಿದೆ ಎಂದು ಮೊದಲು ಗಮನ ಸೆಳೆದಿದ್ದು ನಾನೇ. ಬಿಜೆಪಿಯವರು ಇದುವರೆಗೂ ಏನೂ ಮಾತನಾಡಿರಲಿಲ್ಲ. ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡುತ್ತಿದ್ದರು. ನಾನು ‘ಷಡ್ಯಂತ್ರ’ ವಿಚಾರ ಪ್ರಸ್ತಾವನೆ ಮಾಡಿದ ನಂತರ ಮಾತನಾಡುತ್ತಿದ್ದಾರೆ ಎಂದರು.
ಧರ್ಮಸ್ಥಳದ ಕುಟುಂಬದವರೇ ಬಂದು ಮುಖ್ಯಮಂತ್ರಿಗಳ ಬಳಿ ಮಾತನಾಡಿ, ನೀವು ಎಸ್ ಐಟಿ ರಚನೆ ಮಾಡಿರುವುದು ಒಳ್ಳೆಯ ಕೆಲಸ ಎಂದು ಹೇಳಿದ್ದಾರೆ. ತನಿಖೆ ನಡೆಯುತ್ತಿದೆ. ತಪ್ಪಿತಸ್ಥರು ಯಾರೇ ಇದ್ದರು ನಮ್ಮ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ ಎಂದು ಮುಖ್ಯಮಂತ್ರಿಯವರು, ಗೃಹ ಸಚಿವರು ಸದನದಲ್ಲಿ ಹಾಗೂ ಸಿಎಲ್ ಪಿ ಸಭೆಯಲ್ಲೂ ತಿಳಿಸಿದ್ದಾರೆ ಎಂದರು.
ಅನನ್ಯಾ ಭಟ್ ಪ್ರಕರಣದ ಬಗ್ಗೆ ಸುಜಾತಾ ಭಟ್ ಹೇಳಿಕೆ ವಿಚಾರವಾಗಿ ಇದನ್ನು ಗೃಹಸಚಿವರು ನೋಡಿಕೊಳ್ಳುತ್ತಾರೆ ಎಂದು ಹೇಳಿದರು.