ಬೆಂಗಳೂರು: ನೀರಾವರಿ ಯೋಜನೆಗಳ ವಿಚಾರವಾಗಿ ದೆಹಲಿ ಪ್ರವಾಸ ಬಹುತೇಕ ಫಲಪ್ರದವಾಗಿದ್ದು, ಎತ್ತಿನಹೊಳೆ ಯೋಜನೆ ಸಂಬಂಧ ನಮ್ಮ ಮನವಿಯನ್ನು ಪುರಸ್ಕರಿಸುವುದಾಗಿ ಹೇಳಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ದೆಹಲಿ ಪ್ರವಾಸದಿಂದ ವಾಪಸ್ ಆದ ಬಳಿಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ, ದೆಹಲಿ ಪ್ರವಾಸದಲ್ಲಿ ಕೇಂದ್ರ ಜಲಶಕ್ತಿ ಸಚಿವರಾದ ಸಿ.ಆರ್ ಪಾಟೀಲ್ ಅವರನ್ನು ಭೇಟಿ ಮಾಡಿ ಕೃಷ್ಣಾ ನ್ಯಾಯಾಧಿಕರಣದ ತೀರ್ಪಿನ ಸಂಬಂಧ ಅಧಿಸೂಚನೆ ಹೊರಡಿಸುವುದು, ಮೆಕೆದಾಟು ಯೋಜನೆ ಅಪ್ರೈಸಲ್ ವರದಿ ಬಗ್ಗೆ ಚರ್ಚಿಸಲಾಗಿದೆ. ಅರಣ್ಯ ಸಚಿವರಾದ ಭೂಪೇಂದ್ರ ಯಾದವ್ ಅವರನ್ನು ಭೇಟಿ ಮಾಡಿ ಕಳಸಾ ಬಂಡೂರಿ ವಿಚಾರವಾಗಿ ಚರ್ಚೆ ಮಾಡಲಾಗಿದೆ. ಈ ವಿಚಾರವಾಗಿ ಪ್ರಹ್ಲಾದ್ ಜೋಷಿ ಅವರ ಜತೆಗೂ ಮಾತನಾಡಿದ್ದೇನೆ. ಎರಡು ರಾಜ್ಯಗಳ ನಡುವೆ ರಾಜಿಗೆ ಸಲಹೆ ನೀಡಿದ್ದಾರೆ. ನಾವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಈ ವಿಚಾರದಲ್ಲಿ ಕೆಲವು ತಾಂತ್ರಿಕ ಅಂಶಗಳಿವೆ. ಗೋವಾ ದವರು ನಮಗೆ ಶೋಕಾಸ್ ನೋಟೀಸ್ ನೀಡಿರುವುದು ಸರಿಯಲ್ಲ ಎಂದು ಹೇಳಿದ್ದು, ಕಾನೂನು ತಜ್ಞರ ಜೊತೆ ಚರ್ಚೆ ಮಾಡಲಾಗಿದೆ ಎಂದರು.
ಹೊಸ ಯೋಜನೆಗಳಿಗೆ ಮನವಿ ಸಲ್ಲಿಸಿದ್ದೇವೆ. ಸಂಸತ್ ಅಧಿವೇಶನ ಸಂದರ್ಭದಲ್ಲಿ ಮತ್ತೊಮ್ಮೆ ದೆಹಲಿಗೆ ಹೋಗಿ, ರಾಜ್ಯದ ಸಂಸದರ ಜೊತೆ ಚರ್ಚೆ ನಡೆಸಿ ಒಟ್ಟಾಗಿ ಒತ್ತಾಯ ಹೇರಲು ಮನವಿ ಮಾಡಲಾಗುವುದು ಎಂದು ತಿಳಿಸಿದರು.
ಎತ್ತಿನಹೊಳೆ ಯೋಜನೆ ಸಂಬಂಧ ಲಕ್ಕೇನಹಳ್ಳಿಯಲ್ಲಿ ಅಣೆಕಟ್ಟು ನಿರ್ಮಾಣಕ್ಕೆ ವಿರೋಧ ವಿಚಾರವಾಗಿ ಮಾತನಾಡಿದ ಡಿಸಿಎಂ, ರಸ್ತೆ, ಅಣೆಕಟ್ಟು ಸೇರಿದಂತೆ ಯಾವುದೇ ಯೋಜನೆ ಮಾಡಬೇಕಾದರೂ ವಿರೋಧ ವ್ಯಕ್ತವಾಗುತ್ತದೆ. ಕುಡಿಯುವ ನೀರು ಪೂರೈಸಲೇಬೇಕು. ಈ ನೀರನ್ನು ಎಲ್ಲಾದರೂ ಸಂಗ್ರಹ ಮಾಡಿಕೊಳ್ಳಬೇಕು. ಲಕ್ಕೇನಹಳ್ಳಿ ಮಾತ್ರವಷ್ಟೇ ಅಲ್ಲ, ಕೊರಟಗೆರೆ ಭಾಗದಲ್ಲಿ ಕೆಲವು ಪ್ರದೇಶ ಬಳಸಿಕೊಳ್ಳಬೇಕು ಎಂದು ಆಲೋಚಿಸಿದ್ದೆವು. ನೀರು ಹೇಗೆ ಹರಿಯುತ್ತದೆ ಹೇಳಲು ಸಾಧ್ಯವಿಲ್ಲ. ಈ ವಿಚಾರವಾಗಿ ಪರಮೇಶ್ವರ್ ಅವರ ಜತೆ ಚರ್ಚಿಸಿ, ಮುಂದಿನ ಸಚಿವ ಸಂಪುಟದಲ್ಲಿ ಚರ್ಚೆ ನಡೆಸಲಾಗುವುದು ಎಂದರು.