ಬೆಂಗಳೂರು: ಮೈಕ್ರೋಸಾಫ್ಟ್ ಕಂಪನಿಯ ತಾಂತ್ರಿಕ ಸಿಬ್ಬಂದಿ ಹೆಸರಲ್ಲಿ ಅಮೆರಿಕ ಪ್ರಜೆಗಳಿಗೆ ವಂಚಿಸುತ್ತಿದ್ದ ಸೈಬರ್ ಜಾಲವನ್ನು ವೈಟ್ಫೀಲ್ಡ್ ಸೈಬರ್ ಠಾಣೆ ಪೊಲೀಸರು ಭೇದಿಸಿದ್ದು 21 ಮಂದಿಯನ್ನು ಬಂಧಿಸಿದ್ದಾರೆ.
ವರ್ತೂರು ಕೋಡಿಯಲ್ಲಿರುವ ಸಿಗ್ಮಾ ಸಾಫ್ಟ್ ಟೆಕ್ ಪಾರ್ಕ್ ನಲ್ಲಿ ಮಸ್ಕ್ ಕಂಪನಿಯ ಹೆಸರಲ್ಲಿ ಮೂರು ತಿಂಗಳಿನಿಂದ ಸೈಬರ್ ವಂಚನೆ ನಡೆಸಲಾಗುತ್ತಿತ್ತು. ಈ ಮಾಹಿತಿ ಆಧರಿಸಿ ವೈಟ್ಫೀಲ್ಡ್ ಸೈಬರ್ ಮತ್ತು ಸಿಐಡಿ ಸೈಬರ್ ಕಮಾಂಡ್ ಘಟಕದ ಅಧಿಕಾರಿಗಳು ಜಂಟಿ ದಾಳಿ ನಡೆಸಿದ್ದಾರೆ.
ದಾಳಿಯ ವೇಳೆ ವಂಚನೆಗೆ ಬಳಸುತ್ತಿದ್ದ ಕಂಪ್ಯೂಟರ್, ಮೊಬೈಲ್ ಸೇರಿದಂತೆ ಹಲವು ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ವಂಚನೆಯಲ್ಲಿ ತೊಡಗಿದ್ದ ಉತ್ತರ ಭಾರತ ಮೂಲದ 21 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.
ಆರೋಪಿಗಳು ಮೈಕ್ರೋಸಾಫ್ಟ್ ಕಂಪನಿಯ ತಾಂತ್ರಿಕ ಸಿಬ್ಬಂದಿ ಹೆಸರಲ್ಲಿ ಅಮೆರಿಕ ಪ್ರಜೆಗಳಿಗೆ ಸಂದೇಶ ಮತ್ತು ಕರೆಗಳನ್ನು ಮಾಡಿ ವಂಚಿಸುತ್ತಿದ್ದರು. ಆರೋಪಿಗಳು ವಂಚನೆ ಮಾಡಿರುವ ಹಣದ ಪ್ರಮಾಣ ಮತ್ತು ಸಂತ್ರಸ್ತರ ಕುರಿತು ತನಿಖೆ ಮುಂದುವರೆದಿದೆ.
