ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 66 ವರ್ಷದ ನಿವೃತ್ತ ಅಧಿಕಾರಿಯೊಬ್ಬರಿಗೆ ಸೈಬರ್ ವಂಚಕರು 15 ದಿನಗಳ ಕಾಲ ಡಿಜಿಟಲ್ ಅರೆಸ್ಟ್ ಹೆಸರಲ್ಲಿ ವಂಚಿಸಿದ್ದು, ಬರೋಬ್ಬರಿ 1.62 ಕೋಟಿ ರೂಪಾಯಿ ದೋಚಿದ್ದಾರೆ.
ಮಾನವ ಕಳ್ಳಸಾಗಣೆ ಆರೋಪದ ಬೆದರಿಕೆ ಹಾಕಿ 15 ದಿನಗಳ ಕಾಲ ಡಿಜಿಟಲ್ ಅರೆಸ್ಟ್ ಮಾಡಿರುವ ವಂಚಕರು ಹಂತ ಹಂತವಾಗಿ 1.62 ಕೋಟಿ ರೂಪಾಯಿ ಹಣ ವರ್ಗಾಯಿಸಿಕೊಂಡಿದ್ದಾರೆ.
ಸೆ.27ರಂದು ಮಧ್ಯಾಹ್ನ ವ್ಯಕ್ತಿಗೆ ಪೊಲೀಸ್ ಅಧಿಕಾರಿಗಳು ಎಂದು ಕರೆ ಮಾಡಿದ್ದಾರೆ. ಮುಂಬೈನ ಐಷಾರಾಮಿ ಹೋಟೆಲ್ ಮೇಲೆ ದಾಳಿ ನಡೆಸಿದಾಗ ನಿಮ್ಮ ಹೆಸರಿನ ದಾಖಲೆಗಳು ಸಿಕ್ಕಿವೆ. ನಿಮ್ಮ ವಿರುದ್ಧ ಮಾನವ ಕಳ್ಳ ಸಾಗಣೆ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ನಿಮ್ಮನ್ನು ಬಂಧಿಸಲಾಗುವುದು ಎಂದು ಬೆದರಿಕೆ ಹಾಕಿದ್ದಾರೆ. ನಿಮ್ಮ ಹಣವನ್ನು ಸೇಫ್ ಮಾಡಲು ಹೇಳಿದ ಖಾತೆಗೆ ಜಮೆ ಮಾಡುವಂತೆ ಬಳಿಕ ಮರುಪಾವತಿ ಮಾಡುವುದಾಗಿ ಹೆದರಿಸಿದ್ದಾರೆ.
ವಂಚಕರ ಕರೆ ನಂಬಿದ ವ್ಯಕ್ತಿ ಹಂತ ಹಂತವಾಗಿ ತಮ್ಮ ಬ್ಯಾಂಕ್ ಖಾತೆಗಳ ಬಗ್ಗೆ ವಿವರ ನೀಡಿ ಹಣ ಹಾಕಿದ್ದಾರೆ. ವಂಚಕರು ವ್ಯಕ್ತಿಗೆ ಅನುಮಾನ ಬರಬಾರದೆಂದು ಒಟಿಪಿ ಸಂಖ್ಯೆಯನ್ನೂ ಕಳುಹಿಸಿದ್ದಾರೆ.ಸೆ. 27ರಿಂದ ಅಕ್ಟೋಬರ್ 10ರ ನಡುವೆ 1.62,77,160 ರೂಪಾಯಿ ಖಾತೆಯಿಂದ ವರ್ಗಾವಣೆಗೊಂಡಿದೆ.
ಹಣ ಕಳೆದುಕೊಂಡಿರುವ ವ್ಯಕ್ತಿ ಸೈಬರ್ ವಂಚಕರ ಜಾಲ ಎಂಬುದು ಅರಿತು ಪೊಲೀಸರಿಗೆ ದೂರು ನೀಡಿದ್ದಾರೆ.