ವಿಶ್ವದಾದ್ಯಂತ 106 ದೇಶಗಳನ್ನು ಸುತ್ತಾಡಿರುವ ಕ್ರಿಸ್ಟೀನ್ ಕೆಸ್ಟೆಲೂ ಎಂಬ ಮಹಿಳೆ, ಕ್ರೂಸ್ ಹಡಗಿನಲ್ಲಿ ವಾಸಿಸುವ ಮೂಲಕ ಉಚಿತ ಜೀವನವನ್ನು ನಡೆಸುತ್ತಿದ್ದಾರೆ. ಒಮ್ಮೆ ಕ್ರೂಸ್ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸಿದ್ದ ಇವರು, ತಮ್ಮ ಪತಿ ಕ್ರೂಸ್ ಲೈನ್‌ನ ಮುಖ್ಯ ಇಂಜಿನಿಯರ್ ಆಗಿರುವುದರಿಂದ ಈ ವಿಶೇಷ ಸೌಲಭ್ಯವನ್ನು ಪಡೆಯುತ್ತಿದ್ದಾರೆ. ವರ್ಷದ ಅರ್ಧ ಭಾಗ ನೆದರ್‌ಲ್ಯಾಂಡ್ಸ್‌ನಲ್ಲಿ ಮತ್ತು ಉಳಿದರ್ಧ ಭಾಗವನ್ನು ಹಡಗಿನಲ್ಲಿ ಕಳೆಯುವ ಅಮೆರಿಕದ ಈ ಮಹಿಳೆ ಕಳೆದ ಹತ್ತು ವರ್ಷಗಳಿಂದ ಉಚಿತ ಊಟ, ವಸತಿ ಮತ್ತು ಇತರ ಸೌಲಭ್ಯಗಳನ್ನು ಅನುಭವಿಸುತ್ತಿದ್ದಾರೆ.
ಆದರೆ ಈ ಎಲ್ಲಾ ಸವಲತ್ತುಗಳನ್ನು ಪಡೆಯಲು ಕ್ರಿಸ್ಟೀನ್ ಒಂದು ವಿಚಿತ್ರವಾದ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಅದೇನು ಗೊತ್ತಾ ? ಹಡಗಿನ ಕ್ಯಾಸಿನೊ ನೆಲದಿಂದ ದೂರವಿರುವುದು ! ಹೌದು, ಮುಖ್ಯ ಇಂಜಿನಿಯರ್ ಪತ್ನಿಯಾಗಿ ಅವರು ದೊಡ್ಡ ಮೊತ್ತದ ಜಾಕ್‌ಪಾಟ್ ಗೆದ್ದರೆ ಅದು ವಿಚಿತ್ರವಾಗಿ ಕಾಣಿಸಬಹುದು ಎಂಬ ಕಾರಣಕ್ಕೆ ಅವರಿಗೆ ಹಡಗಿನಲ್ಲಿ ಜೂಜಾಟ ಆಡುವಂತಿಲ್ಲ.
ಟಿಕ್‌ಟಾಕ್‌ನಲ್ಲಿ ಲಕ್ಷಾಂತರ ಅನುಯಾಯಿಗಳನ್ನು ಹೊಂದಿರುವ ಕ್ರಿಸ್ಟೀನ್, ಸಿಬ್ಬಂದಿ ಸದಸ್ಯರ ಸಂಗಾತಿಗಳಿಗೆ ಹಡಗಿನಲ್ಲಿ ಉಚಿತ ವಸತಿ ಸೌಲಭ್ಯ ದೊರೆಯುತ್ತದೆ ಎಂದು ಬಹಿರಂಗಪಡಿಸಿದ್ದಾರೆ. ಇದರೊಂದಿಗೆ ಸ್ಪಾ, ಹಡಗಿನ ಅಂಗಡಿಗಳು, ಮದ್ಯ ಹಾಗೂ ತಂಪು ಪಾನೀಯಗಳ ಮೇಲೆ ಶೇಕಡಾ 50 ರಷ್ಟು ರಿಯಾಯಿತಿಯನ್ನು ಸಹ ಪಡೆಯುತ್ತಾರೆ. ಅಷ್ಟೇ ಅಲ್ಲ, ರಿಯಾಯಿತಿ ದರದಲ್ಲಿ ಇಂಟರ್ನೆಟ್ ಸೌಲಭ್ಯವೂ ಲಭ್ಯವಿದೆ.
ಹಡಗಿನಲ್ಲಿ ಪೀಟ್ ಅವರ ಸ್ಥಾನಕ್ಕೆ ನಿಗದಿಪಡಿಸಿದ ಅತ್ಯುತ್ತಮ ಕ್ಯಾಬಿನ್‌ನಲ್ಲಿ ತಾವು ವಾಸಿಸುತ್ತಿರುವುದಾಗಿ ಕ್ರಿಸ್ಟೀನ್ ಹೇಳಿಕೊಂಡಿದ್ದಾರೆ. ಬ್ಯಾಡ್ಜ್ ಧರಿಸಿರುವವರೆಗೆ ಸಿಬ್ಬಂದಿ ವಲಯಗಳು ಮತ್ತು ಅತಿಥಿಗಳಿಗೆ ಮೀಸಲಾದ ಎಲ್ಲಾ ಸ್ಥಳಗಳಿಗೂ ಭೇಟಿ ನೀಡಲು ಅವರಿಗೆ ಅನುಮತಿ ಇದೆ. ಹೀಗಾಗಿ ಅವರು ಅತಿಥಿಯಾಗಿ ಮತ್ತು ಸಿಬ್ಬಂದಿಯಾಗಿಯೂ ಹಡಗಿನ ಬಹುತೇಕ ಎಲ್ಲಾ ಸೌಲಭ್ಯಗಳನ್ನು ಬಳಸಿಕೊಳ್ಳುತ್ತಿದ್ದಾರೆ.
ಕ್ರಿಸ್ಟೀನ್ ಹಡಗಿನ ಸೌಲಭ್ಯಗಳನ್ನು ಗೌರವಿಸುತ್ತಾರೆ. ಅತಿಥಿಗಳು ಪೂಲ್, ಸ್ಪಾ, ಜಿಮ್ ಮತ್ತು ಸನ್ ಲಾಂಜರ್‌ಗಳನ್ನು ಬಳಸಿದ ನಂತರವೇ ತಾವು ಬಳಸುವುದಾಗಿ ಅವರು ತಿಳಿಸಿದ್ದಾರೆ. ಒಟ್ಟಾರೆಯಾಗಿ, ಕ್ರೂಸ್ ಹಡಗು ಅವರಿಗೆ ಉಚಿತ ಮತ್ತು ಐಷಾರಾಮಿ ಜೀವನಶೈಲಿಯನ್ನು ಒದಗಿಸಿದೆ ಎಂದರೆ ತಪ್ಪಾಗಲಾರದು.