ಒಂದೇ ಮಂಟಪದಲ್ಲಿ ಇಬ್ಬರು ಪ್ರೇಯಸಿಯರನ್ನು ವರಿಸಿದ ಭೂಪ

ಮದುವೆಯಾಗಲು ಒಂದು ಹೆಣ್ಣು ಹುಡುಕೋದ್ರಲ್ಲೇ ದಣಿದು ಹಣ್ಣಾಗುತ್ತಿರುವ ಬಿಸಿ ರಕ್ತದ ಯುವಕರ ನಡುವೆ ಇಲ್ಲೊಬ್ಬ ಇಬ್ಬರನ್ನು ಒಂದೇ ಮಂಟಪದಲ್ಲಿ ವರಿಸಿದ್ದಾನೆ. ತೆಲಂಗಾಣದಲ್ಲಿ ಜರುಗಿದ ಈ ಘಟನೆಯಲ್ಲಿ, ತಾನು ಸಂಬಂಧ ಬೆಳೆಸಿದ್ದ ಇಬ್ಬರು ಮಹಿಳೆಯರನ್ನು ಬುಡಕಟ್ಟು ಪುರುಷನೊಬ್ಬ ಒಂದೇ ಮಂಟಪದಲ್ಲಿ ವರಿಸಿದ್ದಾನೆ.

ಭದ್ರಾದ್ರಿ ಕೋತಗುಡೆಂ ಜಿಲ್ಲೆಯ ಮಾದಿವಿ ಸತಿಬಾಬು ಹೆಸರಿನ ಈ ವ್ಯಕ್ತಿ ಒಂದೇ ಸಮಾರಂಭದಲ್ಲಿ ಇಬ್ಬರು ಮಹಿಳೆಯರನ್ನು ವರಿಸಿದ್ದಾನೆ. ಇಲ್ಲಿನ ಚೇರ್ಲಾ ಮಂಡಲದ ಎರ‍್ರಬೋರು ಗ್ರಾಮದ ಸತಿಬಾಬು ಸುನಿತಾ ಹಾಗೂ ಸ್ವಪ್ನಾ ಹೆಸರಿನ ಇಬ್ಬರು ಮಹಿಳೆಯರನ್ನು ವರಿಸಿದ್ದಾನೆ.

ಈ ಮದುವೆಗೆ ಇಬ್ಬರೂ ಹೆಣ್ಣಿನ ಮನೆಯವರ ಸಂಪೂರ್ಣ ಸಹಮತವಿದ್ದು, ಭಾರೀ ಸಂತೋಷದಿಂದ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ.

“ಸತಿಬಾಬುನ ಮೊದಲ ಪ್ರೇಯಸಿ ಸ್ವಪ್ನಾಗೆ ಆತ ಮತ್ತೊಂದು ಮಹಿಳೆಯೊಂದಿಗೆ ಮದುವೆಯಾಗುವುದು ಇಷ್ಟವಿರಲಿಲ್ಲ. ಆದರೆ ಸತಿಬಾಬು ಇಬ್ಬರನ್ನೂ ಮದುವೆಯಾಗುವುದಾಗಿ ತಿಳಿಸಿದ ಬಳಿಕ ಇಬ್ಬರೂ ಹೆಂಗಸರ ಮನೆಯವರು ಸಂಪ್ರದಾಯದಂತೆ ಮದುವೆ ಮಾಡಲು ಒಪ್ಪಿಕೊಂಡಿದ್ದಾರೆ,” ಎಂದಿದ್ದಾರೆ ಊರಿನ ಹಿರೀಕರು.

ವಿದ್ಯಾರ್ಥಿಗಳಾಗಿದ್ದ ದಿನಗಳಿಂದಲೇ ಸತಿಬಾಬು ಹಾಗೂ ಸ್ವಪ್ನಾ ನಡುವೆ ಪ್ರೇಮಾಂಕುರವಾಗಿದೆ. ಇದೇ ವೇಳೆ ಪಕ್ಕದೂರಿನ ಸುನಿತಾ ಹೆಸರಿನ ಮಹಿಳೆಯೊಂದಿಗೂ ಸಹ ಸತಿಬಾಬು ಸಂಬಂಧ ಇಟ್ಟುಕೊಂಡಿದ್ದ. ಇಬ್ಬರೂ ಮಹಿಳೆಯರಿಗೆ ಮಕ್ಕಳನ್ನೂ ಕರುಣಿಸಿದ್ದ ಸತಿಬಾಬು. ಇದಾದ ಬಳಿಕ ತಮ್ಮನ್ನು ಮದುವೆಯಾಗಲು ಸತಿಬಾಬುವನ್ನು ಇಬ್ಬರೂ ಮಹಿಳೆಯರು ದಂಬಾಲು ಬಿದ್ದಿದ್ದಾರೆ.

ಕೊನೆಯಲ್ಲಿ ಇಬ್ಬರನ್ನೂ ವರಿಸಲು ಸತಿಬಾಬು ನಿರ್ಧರಿಸಿದ್ದಾನೆ. ಬುಡಕಟ್ಟು ಜನಾಂಗದ ಸಂಪ್ರದಾಯಗಳ ಅನುಸಾರ ವರನೊಬ್ಬ ಇಬ್ಬರು ಹೆಣ್ಣುಗಳನ್ನು ವರಿಸಬಹುದಾಗಿದೆ. ಹೀಗಾಗಿ ಈ ಮದುವೆ ಸಮಾರಂಭಕ್ಕೆ ಗ್ರಾಮದ ಹಿರಿಕರು ಒಪ್ಪಿಗೆ ಸೂಚಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read