ಕೊಳಚೆ ನೀರಿನಲ್ಲಿ ನಿಂತು ಮದುವೆ ಮಾಡಿಕೊಂಡ ಜೋಡಿ; ಮೂಗಿನ ಮೇಲೆ ಬೆರಳಿಡುವಂತೆ ಮಾಡುತ್ತೆ ಇದರ ಹಿಂದಿನ ಕಾರಣ…!

ಆಗ್ರಾದಲ್ಲಿ ಕೊಳಚೆಯಲ್ಲಿ ನಿಂತು ವಿವಾಹವಾಗುವ ಮೂಲಕ ದಂಪತಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ. ಭಗವಾನ್‌ ಶರ್ಮಾ ಹಾಗೂ ಉಷಾದೇವಿ ಕೊಳಕು ನೀರು ತುಂಬಿದ್ದ ರಸ್ತೆಯಲ್ಲೇ ನಿಂತು ಮದುವೆಯಾಗಿದ್ದಾರೆ. ಗಬ್ಬು ನಾರುತ್ತಿರುವ ಚರಂಡಿ ಮತ್ತು ಕಸದ ನಡುವೆಯೇ ಈ ವಿವಾಹ ನೆರವೇರಿದೆ.

ಭಗವಾನ್‌ ಹಾಗೂ ಉಷಾದೇವಿ ತಮ್ಮ 17ನೇ ವಿವಾಹ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಹಾರ ಬದಲಾಯಿಸಿಕೊಂಡಿದ್ದಾರೆ. ನೈರ್ಮಲ್ಯದ ಬಗ್ಗೆ ಸ್ಥಳೀಯ ಆಡಳಿತದ ಗಮನಸೆಳೆಯಲು ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಕಳೆದ 15 ವರ್ಷಗಳಿಂದ ಈ ಪ್ರದೇಶದಲ್ಲಿ ಕೊಳಕು ನಾರುತ್ತಿದೆ. ರಸ್ತೆಗಳೆಲ್ಲ ಗಬ್ಬೆದ್ದು ಹೋಗಿವೆ. ಆದರೂ ಸ್ಥಳೀಯ ಆಡಳಿತ ಈ ಬಗ್ಗೆ ಗಮನಹರಿಸಿಲ್ಲ.

ಸ್ವಚ್ಛತೆ ಬಗ್ಗೆ ಅಧಿಕಾರಿಗಳು ಗಮನಹರಿಸುವವರೆಗೂ ಹುಟ್ಟುಹಬ್ಬ, ವಾರ್ಷಿಕೋತ್ಸವ ಇನ್ನಿತರ ಕಾರ್ಯಕ್ರಮಗಳನ್ನು ಇದೇ ಕೊಳಕು ಪ್ರದೇಶದಲ್ಲಿ ಆಚರಿಸಿಕೊಳ್ಳಲು ದಂಪತಿ ನಿರ್ಧರಿಸಿದ್ದಾರೆ. ಬ್ಯೂಟಿ ಪಾರ್ಲರ್‌ಗೆ ತೆರಳಿ ನವವಧುವಿನಂತೆ ಅಲಂಕಾರ ಮಾಡಿಕೊಂಡ ಉಷಾದೇವಿ ಸ್ಥಳಕ್ಕೆ ಆಗಮಿಸಿದ್ದಳು.

ಭಗವಾನ್‌ ಶರ್ಮಾ ಕೂಡ ವರನ ಅವತಾರದಲ್ಲಿ ದಿಬ್ಬಣದ ಜೊತೆಗೆ ಸ್ಥಳಕ್ಕೆ ಬಂದಿದ್ದ. ಪುರೋಹಿತರ ಮಂತ್ರೋಚ್ಛಾರಣೆಯ ನಡುವೆ ಭಗವಾನ್‌ ಹಾಗೂ ಉಷಾದೇವಿ ಹಾರ ಬದಲಾಯಿಸಿಕೊಂಡರು. ಲಕ್ಷದ್ವೀಪ ಅಥವಾ ಮಾಲ್ಡೀವ್ಸ್‌ನಲ್ಲಿ ವಾರ್ಷಿಕೋತ್ಸವ ಆಚರಿಸಿಕೊಳ್ಳಬೇಕೆಂದು ದಂಪತಿ ನಿರ್ಧರಿಸಿದ್ದರು. ಆದರೆ ಸ್ಥಳೀಯ ಆಡಳಿತಕ್ಕೆ ಚುರುಕು ಮುಟ್ಟಿಸಲು ಕೊಳಕು ತುಂಬಿದ ರಸ್ತೆಯಲ್ಲಿ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ.

ಚರಂಡಿ ಅವ್ಯವಸ್ಥೆ ಹಾಗೂ ಕಸದ ವಿಲೇವಾರಿ ಇಲ್ಲದೆ ರಸ್ತೆಯೇ ಚಂಡಿಯಾಗಿದೆ. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಚರಂಡಿ ಬಳಿ ವಾರ್ಷಿಕೋತ್ಸವ ಆಚರಣೆ ಕುರಿತು ಪ್ರತಿಕ್ರಿಯಿಸಿದ ಸ್ಥಳೀಯ ಅಧಿಕಾರಿಗಳು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read