ಧಾರವಾಡ: ಹೈದರಾಬಾದ್ ನಲ್ಲಿ ಮಾಜಿ ಕೇಂದ್ರ ಸಚಿವ ಪಿ. ಶಿವಶಂಕರ್ ಅವರ ಪುತ್ರ ಪಿ. ವಿನಯಕುಮಾರ್ ಸೇರಿದಂತೆ ಇತರರಿಗೆ 23 ಕೋಟಿ ರೂಪಾಯಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡ ಜಿಲ್ಲಾ ಪೊಲೀಸರು ದಂಪತಿಯನ್ನು ಬಂಧಿಸಿದ್ದಾರೆ.
ಕಳೆದ ತಿಂಗಳು ಬಂಧನಕ್ಕೆ ಒಳಗಾಗಿ ತಪ್ಪಿಸಿಕೊಂಡಿದ್ದ ದಂಪತಿಯನ್ನು ಧಾರವಾಡ ಜಿಲ್ಲಾ ಪೊಲೀಸರು ಬಂಧಿಸಿ ಹೈದರಾಬಾದ್ ಪೊಲೀಸರಿಗೆ ಒಪ್ಪಿಸಿದ್ದಾರೆ.
ಹೈದರಾಬಾದ್ ನ ಸತೀಶ ಉಪ್ಪಾಲಪಟ್ಟಿ, ಶಿಲ್ಪಾ ಬಂಡಾ ಬಂಧಿತ ದಂಪತಿ. ಅಕ್ಟೋಬರ್ 23ರಂದು ಮಹಾರಾಷ್ಟ್ರದಲ್ಲಿ ಅವರನ್ನು ಬಂಧಿಸಿದ ಹೈದರಾಬಾದ್ ಪೊಲೀಸರು ಕರೆದುಕೊಂಡು ಹೋಗುವಾಗ ಸದಾಶಿವಪೇಟೆಯಲ್ಲಿ ಊಟಕ್ಕೆ ನಿಲ್ಲಿಸಿದ ವೇಳೆ ಆರೋಪಿಗಳು ಪರಾರಿಯಾಗಿದ್ದರು.
ದಂಪತಿ ಬೇರೆ ಬೇರೆ ರಾಜ್ಯಗಳಲ್ಲಿ ಸುತ್ತಾಡುತ್ತಿದ್ದರು. ಶುಕ್ರವಾರ ಹುಬ್ಬಳ್ಳಿ -ಧಾರವಾಡ ಬೈಪಾಸ್ ಮೂಲಕ ಹೋಗುತ್ತಿರುವ ಬಗ್ಗೆ ಮಾಹಿತಿ ಆಧರಿಸಿ ಧಾರವಾಡ ಪೊಲೀಸರು ಆರೋಪಿಗಳ ಜೊತೆಗೆ ಪ್ರಯಾಣಿಸುತ್ತಿದ್ದ ಮೂವರು ಸೇರಿದಂತೆ ಐವರನ್ನು ಬಂಧಿಸಿ ಹೈದರಾಬಾದ್ ಪೊಲೀಸರಿಗೆ ಒಪ್ಪಿಸಿದ್ದಾರೆ.
ಖಾಸಗಿ ಕಂಪನಿಯಲ್ಲಿ ಉತ್ತಮ ಆದಾಯ ನೀಡುವ ಭರವಸೆಯೊಂದಿಗೆ ಜನರಿಗೆ ಹಣ ಹೂಡಿಕೆಗೆ ಮನವೊಲಿಸಿದ್ದ ಆರೋಪಿಗಳು 23 ಕೋಟಿ ಸಂಗ್ರಹಿಸಿದ್ದರು. ಹೈದರಾಬಾದ್ ಸೆಂಟ್ರಲ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
