ಗಾಜಿಯಾಬಾದ್(ಉತ್ತರ ಪ್ರದೇಶ): ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಮಹಿಳೆಯನ್ನು ರಕ್ಷಿಸಲು ಹಿಂದನ್ ಕಾಲುವೆಗೆ ಹಾರಿದ ಸಂಚಾರ ಪೊಲೀಸ್ ಪೇದೆಯೊಬ್ಬರು ಶನಿವಾರ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಂಕಿತ್ ತೋಮರ್ ಎಂದು ಗುರುತಿಸಲಾದ ಕಾನ್‌ಸ್ಟೆಬಲ್ ಇಪ್ಪತ್ತರ ಆಸುಪಾಸಿನವರಾಗಿದ್ದರು. ಡೈವರ್ ಗಳು ಕೆಸರುಮಯ ಕಾಲುವೆಯಿಂದ ಅವರನ್ನು ಎಳೆದು ತಂದು ನಂತರ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಪೊಲೀಸರ ಪ್ರಕಾರ, ವೈಶಾಲಿ ಸೆಕ್ಟರ್ 2 ರ ನಿವಾಸಿ ಆರತಿ(23) ಶನಿವಾರ ಬೆಳಿಗ್ಗೆ ತನ್ನ ಪತಿ ಆದಿತ್ಯ ಜೊತೆಗಿನ ಕೌಟುಂಬಿಕ ಕಲಹದ ನಂತರ ಕಾಲುವೆಗೆ ಹಾರಿದಾಗ ಈ ಘಟನೆ ನಡೆದಿದೆ.
ಸಮೀಪದಲ್ಲಿ ಕರ್ತವ್ಯದಲ್ಲಿದ್ದ ಸಂಚಾರ ಸಬ್-ಇನ್ಸ್‌ಪೆಕ್ಟರ್(ಟಿಎಸ್‌ಐ) ಧರ್ಮೇಂದ್ರ ಮತ್ತು ಕಾನ್‌ಸ್ಟೆಬಲ್ ಅಂಕಿತ್ ತೋಮರ್ ತಕ್ಷಣ ಕಾಲುವೆಗೆ ಹಾರಿದರು, ಆರತಿಯನ್ನು ರಕ್ಷಿಸಲು ಮುಂದಾದರು.
ಹಲವಾರು ದಾರಿಹೋಕರು ರಕ್ಷಣಾ ಕಾರ್ಯದಲ್ಲಿ ಸಹಾಯ ಮಾಡಿದ್ದಾರೆ. ಆರತಿಯನ್ನು ಸುರಕ್ಷಿತವಾಗಿ ಎಳೆದು ತರುವಾಗ, ಟಿಎಸ್‌ಐ ಮತ್ತು ಕಾನ್‌ಸ್ಟೆಬಲ್ ತೋಮರ್ ಕಾಲುವೆಯ ಮಣ್ಣಿನಲ್ಲಿ ಸಿಲುಕಿಕೊಂಡಿದ್ದಾರೆ.
ಟಿಎಸ್‌ಐ ಧರ್ಮೇಂದ್ರ ಹೊರ ಬರುವಲ್ಲಿ ಯಶಸ್ವಿಯಾದರೂ, ತೋಮರ್ ಸಿಕ್ಕಿಬಿದ್ದಿದ್ದರು. ಡೈವರ್‌ಗಳು ಅಂತಿಮವಾಗಿ ಅವರನ್ನು ಎಳೆದು ತರುವಲ್ಲಿ ಯಶಸ್ವಿಯಾದರು ಮತ್ತು ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಅವರು ಸಾವನ್ನಪ್ಪಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಡಿಸಿಪಿ ಹೇಳಿದ್ದಾರೆ.