ಕೊಪ್ಪಳ: ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರ ಎಸಗಿದ್ದ ಅಪರಾಧಿಗೆ 20 ವರ್ಷಗಳ ಜೈಲು ಶಿಕ್ಷೆ ಹಾಗೂ 25 ಸಾವಿರ ರೂ. ದಂಡ ವಿಧಿಸಿ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ತ್ವರಿತ ವಿಲೇವಾರಿ ನ್ಯಾಯಾಲಯ(ಪೋಕ್ಸೋ)ದ ನ್ಯಾಯಾಧೀಶರಾದ ಕುಮಾರ ಡಿ.ಕೆ ಅವರು ತೀರ್ಪು ನೀಡಿದ್ದಾರೆ.
ತಾವರಗೇರಾದ ಬಸವಣ್ಣ ಕ್ಯಾಂಪ್ ನಿವಾಸಿ ತಿಪ್ಪಣ್ಣ ಭೋವಿ ಎಂಬ ವ್ಯಕ್ತಿಯು ತನ್ನ ಮನೆಯ ಹತ್ತಿರದ ಅಪ್ರಾಪ್ತ ಬಾಲಕಿಗೆ ಮದುವೆಯಾಗುವುದಾಗಿ ನಂಬಿಸಿ ಹಾಗೂ ಯಾರಿಗೂ ಹೇಳದಂತೆ ಜೀವ ಬೆದರಿಕೆ ಒಡ್ಡಿ ಹಲವಾರು ಬಾರಿ ಅತ್ಯಾಚಾರ ಎಸಗಿದ್ದು, ಬಾಲಕಿ ಗರ್ಭಿಣಿಯಾದ ನಂತರ ವಿಷಯ ತಿಳಿದ ಬಾಲಕಿಯ ತಾಯಿ ತಾವರಗೇರಾ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ದೂರು ದಾಖಲಿಸಿಕೊಂಡ ಠಾಣೆಯ ಪಿಎಸ್‌ಐ ತಿಮ್ಮಣ್ಣ ಅವರು ಪ್ರಥಮ ಹಂತದ ತನಿಖೆ ನಿರ್ವಹಿಸಿದ್ದರು. ಮುಂದಿನ ತನಿಖೆ ಕೈಗೊಂಡ ಕುಷ್ಟಗಿ ಸಿಪಿಐ ನಿಂಗಪ್ಪ ಎನ್.ಆರ್ ಹಾಗೂ ಯಶವಂತ ಬಿಸನಳ್ಳಿ ಅವರು ಆರೋಪಿತನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಪ್ರಕರಣವು ಸ್ಪೇ.ಎಸ್‌ಸಿ(ಪೋಕ್ಸೋ) ಸಂ:50/203 ರಲ್ಲಿ ದಾಖಲಾಗಿದ್ದು, ವಿಚಾರಣೆಯನ್ನು ನಡೆಸಿದ ನ್ಯಾಯಾಲಯವು ಆರೋಪಿತನ ಮೇಲಿನ ಆರೋಪಗಳು ಸಾಬೀತಾದ ಹಿನ್ನೆಯಲ್ಲಿ ಅಪರಾಧಿ ಎಂದು ನಿರ್ಣಯಿಸಿ 20 ವರ್ಷಗಳ ಜೈಲು ಶಿಕ್ಷೆ ಹಾಗೂ ರೂ.25,000 ದಂಡವನ್ನು ಭರಿಸುವಂತೆ ಹಾಗೂ ದಂಡದ ಮೊತ್ತದಲ್ಲಿ ರೂ.10,000 ಗಳನ್ನು ಬಾಧಿತಳಿಗೆ ನೀಡುವಂತೆ ಮತ್ತು ಸರ್ಕಾರದಿಂದ ರೂ.4 ಲಕ್ಷಗಳ ಪರಿಹಾರವನ್ನು ಬಾಧಿತಳಿಗೆ ನೀಡಬೇಕೆಂದು ಸೆಪ್ಟೆಂಬರ್ 9 ರಂದು ನ್ಯಾಯಾಧೀಶರು ತೀರ್ಪಿನಲ್ಲಿ ಆದೇಶಿಸಿದ್ದಾರೆ.
ಪ್ರಕರಣದಲ್ಲಿ ವಿಶೇಷ ಸರ್ಕಾರಿ ಅಭಿಯೋಜಕರಾದ(ಪೋಕ್ಸೋ) ಗೌರಮ್ಮ ದೇಸಾಯಿ ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು. ತಾವರಗೇರಾ ಪೊಲೀಸ್ ಠಾಣೆ ಸಿಬ್ಬಂದಿ ರಂಗನಾಥ ಹಾಗೂ ವೀರೇಶ ಅವರು ಸಾಕ್ಷಿದಾರರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಲ್ಲಿ ಸಹಕಾರ ನೀಡಿದ್ದಾರೆ ಎಂದು ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕರ(ಪೋಕ್ಸೋ) ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.