ಬೆಳಗಾವಿ : ಪ್ರತಿ ಜಿಲ್ಲೆಗೊಂದು ಮೆಡಿಕಲ್ ಕಾಲೇಜು, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತದೆ. ಇದು ನನ್ನ ಗುರಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಳಗಾವಿಯಲ್ಲಿ ನೂತನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡದ ಉದ್ಘಾಟನೆ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ, ಮಾತನಾಡಿದರು
ಸರ್ಕಾರಿ ಆಸ್ಪತ್ರೆಗೆ ಬರುವವರೆಲ್ಲಾ ಬಡ-ಮಧ್ಯಮ ವರ್ಗದವರು. ಇವರಿಗೂ ಅತ್ಯುತ್ತಮ ಆರೋಗ್ಯ ಸೇವೆ ಒದಗಿಸಲು ಪ್ರತೀ ಜಿಲ್ಲೆಗೆ ಒಂದು ಸರ್ಕಾರಿ ಮೆಡಿಕಲ್ ಕಾಲೇಜು, ಒಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸುವುದು ನನ್ನ ಗುರಿ.ಬರೀ ಆಸ್ಪತ್ರೆ ಕಟ್ಟಡ ಕಟ್ಟಿದರೆ ಸಾಲದು, ಅದಕ್ಕೆ ತಕ್ಕಂತೆ ತಜ್ಞ ವೈದ್ಯರನ್ನೂ ನೇಮಿಸುತ್ತೇವೆ. ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ತೀರ್ಮಾನಿಸಿದ್ದೇವೆ.
ಸದ್ಯ ಪ್ರಭಾಕರ್ ಕೋರೆ ಅವರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರು ಸರ್ಕಾರಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದಕ್ಕಾಗಿ ಕೋರೆ ಅವರಿಗೆ ಅಭಿನಂದಿಸುತ್ತೇನೆ.
ನಮ್ಮ ಸರ್ಕಾರ ಅಸಮಾನತೆಯನ್ನು ಅಳಿಸುವ ದಿಕ್ಕಿನಲ್ಲಿ ತಳ ಸಮುದಾಯಗಳಿಗೆ ಅವಕಾಶ ಮತ್ತು ಅನುಕೂಲಗಳನ್ನು ಕಲ್ಪಿಸುತ್ತಿದೆ. ಅಸಮಾನತೆ ಇರುವವರೆಗೆ ತಳ ಸಮುದಾಯಗಳ ಜನ ಮುಖ್ಯವಾಹಿನಿಗೆ ಬರಲು ಸಾಧ್ಯವಿಲ್ಲ ಎನ್ನುವ ಮಾತುಗಳನ್ನು ನೆನಪಿನಲ್ಲಿ ಇಟ್ಟುಕೊಂಡು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದರು.