ಈ ತಿಂಗಳು ನಡೆದ ಜೆಇಇ ಮುಖ್ಯ ಪರೀಕ್ಷೆಯ ಎರಡನೇ ಹಂತವು ಇದೀಗ ವಿವಾದದ ಕೇಂದ್ರಬಿಂದುವಾಗಿದೆ. ವಿದ್ಯಾರ್ಥಿಗಳು, ಪೋಷಕರು ಹಾಗೂ ತರಬೇತಿ ಸಂಸ್ಥೆಗಳು ಪರೀಕ್ಷಾ ಪತ್ರಿಕೆಗಳಲ್ಲಿ ಗಂಭೀರ ತಪ್ಪುಗಳಾಗಿವೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಬಿಡುಗಡೆ ಮಾಡಿರುವ ಉತ್ತರ ಕೀಗಳ ಬಗ್ಗೆ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ತಮ್ಮ ಅಸಮಾಧಾನವನ್ನು ಹೊರಹಾಕುತ್ತಿದ್ದಾರೆ. ವಿದ್ಯಾರ್ಥಿಗಳ ಆರೋಪದ ಪ್ರಕಾರ, ಜೆಇಇ ಮುಖ್ಯ ಪರೀಕ್ಷೆಯ ಉತ್ತರ ಪತ್ರಿಕೆಯಲ್ಲಿ ಅವರು ನಿಜವಾಗಿ ಉತ್ತರಿಸಿದ ಪ್ರಶ್ನೆಗಳಿಗಿಂತ ಭಿನ್ನವಾದ ಉತ್ತರಗಳು ಕಾಣಿಸುತ್ತಿವೆ. ಏಪ್ರಿಲ್ 2 ರಿಂದ 9 ರವರೆಗೆ ಈ ಪ್ರತಿಷ್ಠಿತ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಯ ಎರಡನೇ ಹಂತ ನಡೆದಿತ್ತು.
ಈ ಗಂಭೀರ ಆರೋಪಗಳ ಬಗ್ಗೆ ಪರೀಕ್ಷೆ ನಡೆಸಿದ ಎನ್‌ಟಿಎ ಇನ್ನೂ ಯಾವುದೇ ಸ್ಪಷ್ಟನೆ ನೀಡಿಲ್ಲ. ವಿದ್ಯಾರ್ಥಿಗಳು ತಾವು ಉತ್ತರಿಸಿದ ಸರಿಯಾದ ಸಂಖ್ಯೆಯ ಪ್ರಶ್ನೆಗಳೇ ಉತ್ತರ ಪತ್ರಿಕೆಯಲ್ಲಿಲ್ಲ ಎಂದು ದೂರಿದ್ದಾರೆ. “ಇದು ತಪ್ಪುಗಳ ದುರಂತ ! ಜೆಇಇ ಮುಖ್ಯ ಪರೀಕ್ಷೆಯ ಉತ್ತರ ಪತ್ರಿಕೆಯು ಅನೇಕ ವಿದ್ಯಾರ್ಥಿಗಳು ಭರ್ತಿ ಮಾಡಿದ ಉತ್ತರಗಳಿಗಿಂತ ಭಿನ್ನವಾಗಿದೆ. ಅಲ್ಲದೆ, ಎನ್‌ಟಿಎ ನೀಡಿದ ಅನೇಕ ಉತ್ತರಗಳು ತಪ್ಪಾಗಿವೆ” ಎಂದು ಓರ್ವ ವಿದ್ಯಾರ್ಥಿ ಬೇಸರ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬ ವಿದ್ಯಾರ್ಥಿ ಜೆಇಇ ಮುಖ್ಯ ಪರೀಕ್ಷೆಯ ಎರಡನೇ ಹಂತದಲ್ಲಿನ ಗೊಂದಲಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಎನ್‌ಟಿಎ ವಿದ್ಯಾರ್ಥಿಗಳನ್ನು ತೀವ್ರ ಒತ್ತಡಕ್ಕೆ ಸಿಲುಕಿಸಿದೆ ಎಂದು ಟೀಕಿಸಿದ್ದಾರೆ. ಅನೇಕ ಪೋಷಕರು ಎನ್‌ಟಿಎ ಮಕ್ಕಳ ಭವಿಷ್ಯದೊಂದಿಗೆ ಆಟವಾಡುತ್ತಿದೆ ಎಂದು ಕಿಡಿಕಾರಿದ್ದು, ಉತ್ತರ ಪತ್ರಿಕೆ ಮತ್ತು ನಿಜವಾದ ಪರೀಕ್ಷಾ ಪತ್ರಿಕೆಯಲ್ಲಿನ ವ್ಯತ್ಯಾಸವನ್ನು ಕಟುವಾಗಿ ಟೀಕಿಸಿದ್ದಾರೆ.
“ನನ್ನ ಮಗಳು 71 ಪ್ರಶ್ನೆಗಳಿಗೆ ಉತ್ತರಿಸಿದ್ದಳು. ಆದರೆ ಸಲ್ಲಿಕೆ ವೇಳೆ 71 ಎಂದೇ ತೋರಿಸಿತ್ತು. ಈಗ ಉತ್ತರ ಪತ್ರಿಕೆಯಲ್ಲಿ ಎಲ್ಲಾ ಪ್ರಶ್ನೆಗಳು ಉತ್ತರಿಸಿಲ್ಲ ಎಂದು ತೋರಿಸುತ್ತಿದೆ ! ಇದು ಆಘಾತಕಾರಿ! ಎನ್‌ಟಿಎ ಮಕ್ಕಳ ಭವಿಷ್ಯದೊಂದಿಗೆ ಆಟವಾಡುತ್ತಿದೆ. ನಾವು ಇಮೇಲ್ ಮಾಡಿದರೂ ಯಾವುದೇ ಪ್ರತಿಕ್ರಿಯೆ ಇಲ್ಲ” ಎಂದು ಓರ್ವ ಪೋಷಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೊಬ್ಬ ಪೋಷಕರು, “ನನ್ನ ಮಗಳು 50 ಪ್ರಶ್ನೆಗಳಿಗೆ ಉತ್ತರಿಸಿದ್ದಾಳೆ ಆದರೆ ಉತ್ತರ ಪತ್ರಿಕೆಯಲ್ಲಿ 48 ಎಂದು ತೋರಿಸುತ್ತಿದೆ. ಅನೇಕ ಪ್ರಶ್ನೆಗಳು ತಪ್ಪು ಎಂದು ತೋರಿಸುತ್ತಿವೆ. ಈ ತಪ್ಪಿನ ಬಗ್ಗೆ ನಾವು ಎನ್‌ಟಿಎಗೆ ಮೇಲ್ ಮಾಡುತ್ತೇವೆ. ನಾನು ಅವಳ ಬಗ್ಗೆ ತುಂಬಾ ಚಿಂತಿತನಾಗಿದ್ದೇನೆ” ಎಂದು ಹೇಳಿದ್ದಾರೆ.
ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಅನೇಕ ವಿದ್ಯಾರ್ಥಿಗಳು ಮತ್ತು ಪೋಷಕರು ಎನ್‌ಟಿಎ ಉತ್ತರ ಕೀಲಿಯಲ್ಲಿ ಸುಮಾರು ಒಂಬತ್ತು ವಾಸ್ತವ ದೋಷಗಳನ್ನು ಗುರುತಿಸಿದ್ದಾರೆ. ಈ ಒಂಬತ್ತು ತಪ್ಪುಗಳಲ್ಲಿ ಭೌತಶಾಸ್ತ್ರದಲ್ಲಿ ನಾಲ್ಕು, ರಸಾಯನಶಾಸ್ತ್ರದಲ್ಲಿ ಮೂರು ಮತ್ತು ಗಣಿತದಲ್ಲಿ ಎರಡು ತಪ್ಪುಗಳಿವೆ. ಒಂದು ತರಬೇತಿ ಸಂಸ್ಥೆಯ ನಿರ್ದೇಶಕರ ಪ್ರಕಾರ, ಈ ಬಗ್ಗೆ ಸೂಕ್ತ ಪುರಾವೆಗಳೊಂದಿಗೆ ಆಕ್ಷೇಪಣೆಗಳನ್ನು ಸಲ್ಲಿಸಲಾಗಿದೆ. ಅಲ್ಲದೆ, ಎನ್‌ಟಿಎ ಈ ದೋಷಪೂರಿತ ಪ್ರಶ್ನೆಗಳಿಗೆ ಬೋನಸ್ ಅಂಕಗಳನ್ನು ನೀಡಬೇಕು ಅಥವಾ ಅವುಗಳನ್ನು ಕೈಬಿಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.